Sunday, September 8, 2024
Homeರಾಷ್ಟ್ರೀಯ | Nationalಸಂವಿಧಾನ ಬದಲಿಸುವ ಕಾರ್ಯ ಮಾಡಿದ್ದು ಇಂದಿರಾಗಾಂಧಿ : ರಾಜನಾಥ್‌ ಸಿಂಗ್‌

ಸಂವಿಧಾನ ಬದಲಿಸುವ ಕಾರ್ಯ ಮಾಡಿದ್ದು ಇಂದಿರಾಗಾಂಧಿ : ರಾಜನಾಥ್‌ ಸಿಂಗ್‌

ನವದೆಹಲಿ,ಮೇ.26- ಸಂವಿಧಾನ ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ಆದರೆ, ಈಗ ಕಾಂಗ್ರೆಸ್‌‍ನವರು ಬಿಜೆಪಿಯವರ ಮೇಲೆ ಗೂಬೆ ಕೂರಿಸಲು ಮುಂದಾಗುತ್ತಿದ್ದಾರೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆರೋಪಿಸಿದ್ದಾರೆ.

1976ರಲ್ಲಿ ಇಂದಿರಾಗಾಂಧಿಯವರು ಸಂವಿಧಾನ ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರೂ ಆದರೆ ಈಗ ಅನಗತ್ಯವಾಗಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅದನ್ನು ಚುನಾವಣಾ ವಿಷಯವನ್ನಾಗಿ ಮಾಡಲು ಕಾಂಗ್ರೆಸ್‌‍ ಪ್ರಯತ್ನಿಸುತ್ತಿದೆ ಎಂದು ಸಿಂಗ್‌ ಮಾಧ್ಯಮಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ನಮ ಸಂವಿಧಾನ ಸಭೆಯು ಸಂವಿಧಾನಕ್ಕೆ ಅಗತ್ಯವಿರುವಂತೆ ತಿದ್ದುಪಡಿಗಳನ್ನು ಮಾಡಬಹುದು ಎಂಬ ಒಮತವನ್ನು ಹೊಂದಿತ್ತು. ಕಾಂಗ್ರೆಸ್‌‍ ಮತ್ತು ಇತರ ರಾಜಕೀಯ ಪಕ್ಷಗಳು ಇದನ್ನು ಬಹಳಷ್ಟು ಮಾಡಿದೆ. ಆದರೆ ಪೀಠಿಕೆಯಲ್ಲಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ಅವರು ಅದನ್ನು ಮಾಡಿದರು ಮತ್ತು ಈಗ ನಮನ್ನು ದೂಷಿಸಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡರೆ ಸಂವಿಧಾನವನ್ನು ಹರಿದು ಬಿಸಾಡುತ್ತದೆ ಎಂದು ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಹೇಳಿಕೆ ನೀಡಿದ ನಂತರ ರಾಜನಾಥ್‌ ಸಿಂಗ್‌ ಅವರ ಹೇಳಿಕೆಗಳು ಬಂದಿವೆ. ಇನ್ನು ಕೆಲವು ಕಾಂಗ್ರೆಸ್‌‍ ಕಾರ್ಯಕರ್ತರು ಬಿಜೆಪಿಯು ಸಂವಿಧಾನದ ಪೀಠಿಕೆಯಿಂದ ಜಾತ್ಯತೀತತೆ ಎಂಬ ಪದವನ್ನು ಕೈಬಿಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು.

ಆಡಳಿತ ಪಕ್ಷವು ಜಾತಿ ಆಧಾರಿತ ಮೀಸಲಾತಿಯನ್ನು ಕೊನೆಗೊಳಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ, ಆದರೆ ಎಂದಿಗೂ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡುವುದಿಲ್ಲ ಎಂದು ಸಿಂಗ್‌ ಹೇಳಿದರು.

ನಾವು ಮೀಸಲಾತಿಯನ್ನು ಏಕೆ ಕೊನೆಗೊಳಿಸುತ್ತೇವೆ? ಈ ದೇಶಕ್ಕೆ ಒಬಿಸಿ, ಎಸ್‌‍ಟಿ ಮೀಸಲಾತಿ ಬೇಕು. ಅವರ (ವಿರೋಧ) ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾವು ಯಾವುದೇ ಪರಿಸ್ಥಿತಿಯಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಸಂವಿಧಾನವಾಗಿ ನೀಡುವುದಿಲ್ಲ ಎಂದು ಹೇಳುತ್ತೇವೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಕ್ಷಣಾ ಸಚಿವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತತ್ವದ ಬಿಜೆಪಿ ಮೂರನೇ ಬಾರಿಗೆ ಗೆಲ್ಲುವ ನಿರೀಕ್ಷೆಯಲ್ಲಿದೆ. ಲೋಕಸಭೆ ಚುನಾವಣೆಯ ಏಳು ಹಂತದ ಮತದಾನದ ಪೈಕಿ ಆರು ಹಂತಗಳು ಈಗಾಗಲೇ ನಡೆದಿದ್ದು, ಜೂನ್‌ 1 ರಂದು ಅಂತಿಮ ಸುತ್ತಿನ ಮತದಾನದ ನಂತರ ಜೂನ್‌ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

RELATED ARTICLES

Latest News