ಇಂದೋರ್, ಡಿ. 26- ಕ್ರಿಸ್‌ಮಸ್ ಹಬ್ಬದಂದು ಸಾಂಟಾ ಕ್ಲಾಸ್ ವೇಷದಲ್ಲಿ ಫುಡ್ ಡಿಲಿವರಿ ಮಾಡುತ್ತಿದ್ದ ಏಜೆಂಟ್‌ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಝೊಮಾಟೊ ಡೆಲಿವರಿ ಏಜೆಂಟ್ ಅನ್ನು ಹಿಂದೂ ಜಾಗರಣ ಮಂಚ್‌ನ ಜಿಲ್ಲಾ ಸಂಚಾಲಕ ಸುಮಿತ್ ಹಾರ್ಡಿಯಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ನೀವು ಸಾಂಟಾ ಕ್ಲಾಸ್‌ನಂತೆ ಧರಿಸುವ ಮೂಲಕ ಆರ್ಡರ್ ಅನ್ನು ತಲುಪಿಸುತ್ತಿದ್ದೀರಾ? ಎಂದು ಹಾರ್ಡಿಯಾ ಆ ವ್ಯಕ್ತಿಯನ್ನು ಕೇಳಿದರು, ಅದಕ್ಕೆ ಏಜೆಂಟ್ ತಲೆಯಾಡಿಸಿ ಹೌದು ಎಂದು ಹೇಳಿದರು.
ನೀವು ಎಂದಾದರೂ ದೀಪಾವಳಿಯಂದು ಭಗವಾನ್ ಶ್ರೀರಾಮನ ವೇಷ ಧರಿಸಿ ಜನರ ಮನೆಗೆ ಹೋಗುತ್ತೀರಾ..? ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಡೆಲಿವರಿ ಏಜೆಂಟ್ ಇಲ್ಲ ಎಂದು ಉತ್ತರಿಸಿದರು.
ನಾವು ಹಿಂದೂಗಳು, ನಾವು ಮಕ್ಕಳಿಗೆ ಏನು ಸಂದೇಶವನ್ನು ನೀಡುತ್ತಿದ್ದೇವೆ. ನೀವು ಕೇವಲ ಸಾಂಟಾ ಕ್ಲಾಸ್‌ನಂತೆ ಧರಿಸಿದರೆ ಮಾತ್ರ ಸಂದೇಶವನ್ನು ರವಾನಿಸುವುದು ಅಗತ್ಯವೇ? ನೀವು ನಿಜವಾಗಿಯೂ ಸಂದೇಶವನ್ನು ಕಳುಹಿಸಲು ಬಯಸಿದರೆ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರಂತೆ ಉಡುಪು ಧರಿಸಿ ಎಂದು ಹಾರ್ಡಿಯಾ ಹೇಳಿದರು.
ಆಗ ಆತ ನಾನು ನನ್ನ ಸಂಸ್ಥೆ ಹೇಳಿದಂತೆ ಕೇಳಿದ್ದೇನೆ ಎಂದಾಗ ನಿನ್ನ ವೇಷಭೂಷಣ ತೆಗೆದುಹಾಕುವಂತೆ ಆತನಿಗೆ ತಿಳಿ ಹೇಳಲಾಯಿತು. ಆತ ಸಾಂಟಾಕ್ಲಾಸ್ ವೇಷ ತೆಗೆದ ನಂತರ ಹೋಗಲು ಬಿಡಲಾಯಿತು.