ಬೆಂಗಳೂರು,ಮಾ.17- ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆಗೆ ಚಾಲನೆ ನೀಡಲಿದ್ದು, ಅನರ್ಹರನ್ನು ಪಟ್ಟಿಯಿಂದ ತೆಗದುಹಾಕಿ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸೌಲತ್ತು ನೀಡಲು ನಮ್ಮ ಸರ್ಕಾರದ ಬದ್ದವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಧಿವೇಶನ ಮುಗಿದ ಬಳಿಕ ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕುವ ಸಂಬಂಧ ರಾಜ್ಯದಾದ್ಯಾಂತ ಪರಿಷ್ಕರಣೆ ಕಾರ್ಯವನ್ನು ಪ್ರಾರಂಭ ಮಾಡಲಾಗುವುದು ಎಂದರು.
ಅನರ್ಹರನ್ನು ಪಟ್ಟಿಯಿಂದ ಮುಲಾಜಿಲ್ಲದೆ ತೆಗೆದುಹಾಕಲಾಗುವುದು. ಅರ್ಹರಿಗೆ ಸರ್ಕಾರದ ಸವಲತ್ತು ಸಿಗಬೇಕು ಎಂಬದು ನಮ್ಮ ಉದ್ದೇಶವಾಗಿದೆ. ನಿಜವಾದ ಫಲಾನುಭವಿಗಳು ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವ ರಾಜ್ಯಗಳ ಫೈಕಿ ಕರ್ನಾಟಕದ ಮೊದಲ ಸ್ಥಾನದಲ್ಲಿ ಇದೆ. ಕೆಲವು ಅನರ್ಹರು ಪಟ್ಟಿಗೆ ಸೇರ್ಪಡೆಯಾಗಿ ದ್ದರಿಂದಲೇ ಇದರ ಸಂಖ್ಯೆ ಹೆಚ್ಚಳವಾಗಿದೆ. ಇದರ ಪರಿಣಾಮ ನಿಜವಾದ ಫಲಾನುಭವಿಗಳಿಗೆ ಸವಲತ್ತು ಸಿಗುತ್ತಿಲ್ಲ. ಇದಕ್ಕೆ ಶೀಘ್ರದಲ್ಲೇ ಕಡಿವಾಣ ಹಾಕಲಾಗುವುದು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಶೇ. 80 ರಷ್ಟು ಬಿಪಿಎಲ್ ಪಡಿತರ ಚೀಟಿ ಹೊಂದಿರುವರಿದ್ದಾರೆ. ನಮ ಮಾರ್ಗಸೂಚಿ ಪ್ರಕಾರ ಸರಾಸರಿಯಂತೆ ಶೇ. 60 ರಿಂದ 65 ರಷ್ಟು ಇರಬೇಕು. ಹೀಗೆ ಅನೇಕ ಕಡೆ ಅನರ್ಹರು ಸೇರಿರುವುದರಿಂದ ಅರ್ಹರು ಪಟ್ಟಿಯಿಂದ ಬಿಟ್ಟು ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳು ಉಂಟಾಗದಂತೆ ಎಚ್ಚರಿಕೆ ವಹಿಸುವ ಆಶ್ವಾಸನೆಯನ್ನು ನೀಡಿದರು.
ಆದಾಯ ತೆರಿಗೆ ಪಾವತಿಸುವವರಿಗೆ ನಿಯಮಗಳ ಪ್ರಕಾರ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಲು ನಮ ನಿಯಮಗಳ ಪ್ರಕಾರ ಅವಕಾಶವಿರುವುದಿಲ್ಲ. ಒಂದು ವೇಳೆ ಮಕ್ಕಳಿಂದ ತಂದೆ- ತಾಯಿಗಳು ಬೇರ್ಪಟ್ಟಿದ್ದರೆ, ಅಂತಹವರು ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲನೆ ನಡೆಸಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆಯಬಹುದು ಎಂದು ಸಚಿವ ಮುನಿಯಪ್ಪ ಅವರು ತಿಳಿಸಿದರು.