ಬೆಂಗಳೂರು, ಜೂ. 12- ನಟ ದರ್ಶನ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ನಮಗೆ ಕಂಡುಬರುತ್ತಿಲ್ಲ. ನಮ ಬಳಿ ಯಾರೂ ಪ್ರಕರಣದಲ್ಲಿ ಪ್ರಭಾವ ಬೀರಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಪೊಲೀಸರು ತೆಗೆದುಕೊಳ್ಳುತ್ತಾರೆ. ಸರ್ಕಾರದ ವತಿಯಿಂದ ಯಾರೂ ಮಧ್ಯಪ್ರವೇಶ ಮಾಡುವುದಿಲ್ಲ. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದರು.
ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ದರ್ಶನ್‌ರನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ದರ್ಶನ್‌ಗಾಗಲೀ, ಪರಮೇಶ್ವರ್‌ಗಾಗಲೀ ಎಲ್ಲರಿಗೂ ಕಾನೂನು ಒಂದೇ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.ಕೊಲೆಯಾದ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ಶ್ರೀಮತಿಯವರ ಬಗ್ಗೆ ಪೋಸ್ಟ್ ಮಾಡಿದ್ದ ಎಂದು ಹೇಳಲಾಗಿದೆ. ಅದಕ್ಕೆ ದೂರು ನೀಡಬಹುದಿತ್ತು. ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಿದ್ದರು.
ಅದನ್ನು ಬಿಟ್ಟು ಕರೆತಂದು ಹೊಡೆದು ಸಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯನ್ನು ತಡೆಯಬಹುದಿತ್ತು. ನಡೆದುಹೋಗಿದೆ. ಜೀವ ಹೋಗಿದೆ. ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಪೊಲೀಸರು ಮಾಡುತ್ತಾರೆ ಎಂದು ಹೇಳಿದರು.
ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್‌ಗೆ ಬಿರಿಯಾನಿ ಅಥವಾ ಚಿಕನ್ ತಂದುಕೊಟ್ಟಿದ್ದಾರಾ ನನಗೆ ಗೊತ್ತಿಲ್ಲ. ಉಪವಾಸದಿಂದ ಸಾಯಿಸಲಿಕ್ಕಂತೂ ಆಗುವುದಿಲ್ಲ. ಪೊಲೀಸ್ ಠಾಣೆಯಲ್ಲಿ ಊಟ ತರಿಸಿಕೊಡುವುದು ಸಾಮಾನ್ಯ ಎಂದರು.ರೇಣುಕಾಸ್ವಾಮಿ ಕುಟುಂಬಕ್ಕೆ ನೆರವು ನೀಡುವ ಸಂಬಂಧ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಲಾಗುವುದು. ಕುಟುಂಬದ ಸದಸ್ಯರು ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಎಲ್ಲವನ್ನೂ ಸಿಬಿಐಗೆ ಕೊಡುವ ಅಗತ್ಯವಿಲ್ಲ. ಈಗಾಗಲೇ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 13 ಜನರನ್ನು ಬಂಧಿಸಲಾಗಿದೆ. ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂಬುದು ಹೆಚ್ಚೂ ಕಡಿಮೆ ಗೊತ್ತಾಗಿದೆ. ಹೀಗಾಗಿ ಬೇರೆ ಸಂಸ್ಥೆಯ ತನಿಖೆಗೆ ನೀಡುವ ಅಗತ್ಯವಿಲ್ಲ ಎಂದರು.
ವಿಚಾರಣೆ ವೇಳೆ ದರ್ಶನ್ ಕೃತ್ಯವನ್ನು ಒಪ್ಪಿಕೊಂಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಪೊಲೀಸರು ಯಾವ ಪ್ರಶ್ನೆ ಕೇಳುತ್ತಾರೆ, ಯಾವ ರೀತಿ ತನಿಖೆ ಮಾಡುತ್ತಾರೆ ಎಂಬೆಲ್ಲಾ ವಿಚಾರಗಳು ನಮಗೆ ಮಾಹಿತಿ ಇರುವುದಿಲ್ಲ. ಅಂತಿಮ ವರದಿಯಲ್ಲಿ ಮಾತ್ರ ವಿಚಾರ ತಿಳಿಯುತ್ತದೆ ಎಂದು ಹೇಳಿದರು.
ದರ್ಶನ್ ಈ ಹಿಂದೆ ಹಲವು ಕೃತ್ಯಗಳಲ್ಲಿ ಇದೇ ರೀತಿ ಭಾಗಿಯಾಗಿದ್ದರು ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರ ವಿರುದ್ಧ ರೌಡಿಶೀಟ್ ತೆರೆಯಬೇಕೇ, ಬೇಡವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿ ಯಾವ ರೀತಿ ಶಿಫಾರಸು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಅಂತಹ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯವಿದೆ ಎಂದರು.
ರೇಣುಕಾಸ್ವಾಮಿ ಅವರು ದರ್ಶನ್‌ರ ಅಭಿಮಾನಿಯಾಗಿದ್ದರು ಎಂಬುದನ್ನು ನಾನು ಮಾಧ್ಯಮದವರಿಂದಲೇ ತಿಳಿದುಕೊಂಡಿದ್ದೇನೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರೋಕ್ಸೊ ಪ್ರಕರಣದ ತನಿಖೆ ನಡೆಯುತ್ತಿದೆ. ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಯಾವುದೇ ಆದೇಶಗಳಿಲ್ಲ ಎಂದು ಹೇಳಿದರು.
ಮಾದಕವಸ್ತು ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರಾಗಿಣಿ ತ್ರಿವೇದಿ ಅವರನ್ನು ಬಾಲಕಾರ್ಮಿಕ ಜಾಗೃತಿ ಅಭಿಯಾನದ ರಾಯಭಾರಿಯಾಗಿ ಪರಿಗಣಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅದು ಕಾರ್ಮಿಕ ಇಲಾಖೆಗೆ ಸೇರಿದ ವಿಚಾರ. ಅವರು ನಮನ್ನಂತೂ ಕೇಳುವುದಿಲ್ಲ ಎಂದರು.
ಪಿಎಸ್‌ಐ ನೇಮಕಾತಿ ಕುರಿತಂತೆ ಇಂದು ಪ್ರಗತಿ ಪರಿಶೀಲನೆ ನಡೆಸಲಾಗುವುದು. 545 ಹುದ್ದೆಗಳಿಗೆ ಆಯ್ಕೆಯಾಗಿರುವವರಿಗೆ ಶೀಘ್ರವೇ ನೇಮಕಾತಿ ಆದೇಶ ನೀಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕೆಲವರು ನ್ಯಾಯಾಲಯಕ್ಕೆ ಹೋಗಿ ಅಲ್ಲಿಂದ ಆದೇಶಗಳನ್ನು ತಂದಾಗ ನಮ ಕೈಕಟ್ಟಿಹಾಕಿದಂತಾಗುತ್ತದೆ ಎಂದು ಹೇಳಿದರು.
545 ಹುದ್ದೆಗಳಿಗೆ ಪರೀಕ್ಷೆ, ಮರುಪರೀಕ್ಷೆ ಸೇರಿ ಹಲವು ಪ್ರಯತ್ನಗಳಾಗಿವೆ. ಇದಾದ ಬಳಿಕ 403 ಹುದ್ದೆಗಳ ನೇಮಕಾತಿ, ಅನಂತರ ಖಾಲಿ ಇರುವ 600 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. 545 ಹುದ್ದೆಗಳ ವಿವಾದ ಇತ್ಯರ್ಥವಾಗದ ಹೊರತು ಉಳಿದವುಗಳ ನೇಮಕಾತಿ ಆಗುವುದಿಲ್ಲ ಎಂದರು.