ಬೆಂಗಳೂರು,ಫೆ.16- ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ನಾಡಿನ ಅನ್ನದಾತರಿಗೆ ಸಿಹಿ ಸುದ್ದಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಂಘಗಳ ಮೂಲಕ ನೀಡುವ ಬಡ್ಡಿ ರಹಿತ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಏರಿಕೆ ಮಾಡಿದ್ದಾರೆ. ಜೊತೆಗೆ ಮಧ್ಯಮ ಮತ್ತು ದೀರ್ಘಾವಧಿ ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಏರಿಸುವ ಮಹತ್ವದ ತೀರ್ಮಾನವನ್ನು ಘೋಷಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯದ 36 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 27 ಸಾವಿರ ಕೋಟಿ ರೂ.ಗಳಷ್ಟು ದಾಖಲೆಯ ಸಾಲಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ 50 ಸಾವಿರ ರೂ.ವರೆಗಿನ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ 21 ಲಕ್ಷ ರೈತರಿಗೆ 7,631 ಕೋಟಿ ರೂ. ಬೆಳೆ ಸಾಲ ಮನ್ನ ಮಾಡಲಾಗಿತ್ತು . ಡಿಸಿಸಿ ಬ್ಯಾಂಕ್‍ಗಳಿಗೆ ಸುಮಾರು 132 ಕೋಟಿ ಬಿಡುಗಡೆಯಾಗದ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಡಿಸಿಸಿ ಬ್ಯಾಂಕ್‍ಗಳಿಗೆ ಬಾಕಿ ಇರುವ 132 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಡಿಸಿಸಿ, ಮತ್ತು ಪಿಕಾರ್ಡ್ ಬ್ಯಾಂಕ್‍ಗಳ ಮಧ್ಯಮ ಅವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಬಡ್ಡಿ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಇದರಿಂದ ಒಟ್ಟು 57 ಸಾವಿರ ರೈತರು ಇದರ ಲಾಭವನ್ನು ಪಡೆಯಲಿದ್ದಾರೆ. ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕ್‍ಗಳಿಗೆ 496 ಕೋಟಿ ಸಾಲ ಮರುಪಾವತಿಯಾಗುವ ನಿರೀಕ್ಷೆಯಿದ್ದು, ಬ್ಯಾಂಕ್‍ಗಳ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆಯಾಗಲಿದೆ ಎಂಬ ಆಶಾಭಾವನೆಯನ್ನು ಅವರು ಇಟ್ಟುಕೊಂಡಿದ್ದಾರೆ.
ಯಾವ ಇಲಾಖೆಗೆ ಎಷ್ಟು ಅನುದಾನ..? : ಇಲ್ಲಿದೆ ಮಾಹಿತಿ
ಮಾಧ್ಯಮಿಕ ಫೆಡರಲ್ ಮತ್ತು ಅಪೆಕ್ಸ್ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಮಹಿಳೆಯರಿಗೆ ಮೀಸಲಾತಿ ತರಲು ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿಸಲಾಗುವುದು ಎಂದು ಹೇಳಿದ್ದಾರೆ. ಯಲಬುರ್ಗಾ, ಬಸವನಬಾಗೇವಾಡಿ, ರಾಣೆಬೆನ್ನೂರು, ಬಳ್ಳಾರಿ, ಎಪಿಎಂಸಿಗಳಲ್ಲಿ 50 ಕೋಟಿ ಹಾಗೂ ರಾಯಚೂರು ಮತ್ತು ಮೈಸೂರಿನಲ್ಲಿ 40 ಕೋಟಿ ವೆಚ್ಚದಲ್ಲಿ ಶೀತಲ ಗೃಹಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.
ರಾಯಚೂರಿನಲ್ಲಿ ಸುಸಜ್ಜಿತ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗಾಗಿ 25 ಕೋಟಿ, ರಾಣಿಬೆನ್ನೂರಿನಲ್ಲಿ 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 272 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವ ಮಾರುಕಟ್ಟೆ ಸಮಿತಿಗಳಿಗೆ ಅನುದಾನ ಒದಗಿಸಲು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಸಮಿತಿಗಳಿಂದ ವಂತಿಕೆಯನ್ನು ಪಡೆಯುವ ಮೂಲಕ ಮಾರಕಟ್ಟೆ ಅಭಿವೃದ್ಧಿ ಸಹಾಯನಿಧಿ ಸ್ಥಾಪಿಸಲು ಕಾನೂನು ರಚನೆ ಜೊತೆಗೆ ಬೆಂಬಲ ಯೋಜನೆ ಜಾರಿಗೆ ತರುವ ಶಾಸನಾತ್ಮಕ ಬೆಂಬಲ ನೀಡಲು ಕ್ರಮ ಜರುಗಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ.