Friday, November 22, 2024
Homeರಾಜ್ಯವಿಧಾನಪರಿಷತ್‌ ಚುನಾವಣೆಯಲ್ಲಿ ಕುತೂಹಲಕಾರಿ ತ್ರಿಕೋನ ಸ್ಪರ್ಧೆ

ವಿಧಾನಪರಿಷತ್‌ ಚುನಾವಣೆಯಲ್ಲಿ ಕುತೂಹಲಕಾರಿ ತ್ರಿಕೋನ ಸ್ಪರ್ಧೆ

ಬೆಂಗಳೂರು,ಮೇ22- ವಿಧಾನಪರಿಷತ್‌ನ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ರಾಜ್ಯದ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಕ್ಕೆ ಬಂಡಾಯ ತಲೆನೋವಾಗಿ ಪರಿಣಮಿಸಿದ್ದು, ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ನೈರುತ್ಯ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಪರಿಷತ್‌ ಚುನಾವಣೆ ಕುತೂಹಲಕಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಪದವೀಧರ ಮತ್ತು ಶಿಕ್ಷಕರ ಆರು ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯು ವಿಧಾನಪರಿಷತ್‌‍ನಲ್ಲಿ ಬಹುಮತವನ್ನು ನಿರ್ಧರಿಸುತ್ತದೆ. ಹೀಗಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷವಾದ ಬಿಜೆಪಿಯು ಈ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ. ಇದರ ಮಧ್ಯೆ ಬಿಜೆಪಿಯ ಮಿತ್ರಪಕ್ಷವಾದ ಜೆಡಿಎಸ್‌‍ಗೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಕಾರಣಕ್ಕೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಇವೆಲ್ಲದರಿಂದಾಗಿ ಈ ಬಾರಿಯ ವಿಧಾನ ಪರಿಷತ್‌ ಚುನಾವಣೆ ಬಹಳ ಪೈಪೋಟಿಯಿಂದ ಕೂಡಿದೆ.

ನೈಋತ್ಯ ಪದವೀಧರ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಬಿಜೆಪಿ ಸೋಲನ್ನೇ ಕಂಡಿಲ್ಲ. ಕಾಂಗ್ರೆಸ್‌‍ ಪಾಲಿಗೆ ಜಯ ಗಗನ ಕುಸುಮವಾಗಿದೆ. ಈ ಬಾರಿ ಮೊದಲ ಜಯದ ಕನಸು ಕಾಣುತ್ತಿದ್ದ ಕಾಂಗ್ರೆಸ್‌‍ಗೆ ಮತ್ತು ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳಬೇಕೆಂಬ ಬಿಜೆಪಿ ಆಕಾಂಕ್ಷೆಗೆ ಅವರದೇ ಪಕ್ಷದ ಮುಖಂಡರು ಅಡ್ಡಗಾಲು ಹಾಕಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಎಸ್‌‍ಎಲ್‌ ಭೋಜೇಗೌಡ ಎನ್‌‍ಡಿಎ ಮೈತ್ರಿ ಅಭ್ಯರ್ಥಿಯಾಗಿದ್ದು, ಬಿಜೆಪಿಯಲ್ಲಿ ಬಂಡಾಯವೆದ್ದ ಸತೀಶ್‌ ಆಚಾರ್ಯ ಅವರು ಪೈಪೋಟಿ ನೀಡಲಿದ್ದಾರೆ.

ಕಾಂಗ್ರೆಸ್‌‍ ಟಿಕೆಟ್‌ ವಂಚಿತರಾದ ಎಸ್ಪಿ ದಿನೇಶ್‌ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಕೆ.ಕೆ.ಮಂಜುನಾಥ್‌ ಕುಮಾರ್‌ ವಿರುದ್ಧ ಇಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಡಾ.ಧನಂಜಯ ಸರ್ಜಿ ಕಣಕ್ಕಿಳಿದಿರುವ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಮೂರು ಬಾರಿ ಬಿಜೆಪಿ ಶಾಸಕರಾಗಿರುವ ಕೆ.ರಘುಪತಿ ಭಟ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಕಳೆದ ಬಾರಿ ಬಿಜೆಪಿ ಟಿಕೆಟ್‌‍ನಲ್ಲಿ ಆಯ್ಕೆಯಾಗಿದ್ದ ಹಾಲಿ ಎಂಎಲ್‌‍ಸಿ ಅಯನೂರು ಮಂಜುನಾಥ್‌ ಅವರನ್ನು ಕಾಂಗ್ರೆಸ್‌‍ ಕಣಕ್ಕಿಳಿಸಿದೆ. ಇಬ್ಬರ ಬಂಡಾಯವು ಎರಡೂ ಪಕ್ಷಗಳಿಗೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮಲೆನಾಡಿನಲ್ಲಿ ಕಾಂಗ್ರೆಸ್‌‍ಗೆ ಮತ್ತು ಕರಾವಳಿಯಲ್ಲಿ ಬಿಜೆಪಿಗೆ ಬರಬಹುದಾದ ಮತಗಳನ್ನು ಬಂಡಾಯ ಅಭ್ಯರ್ಥಿಗಳು ಸೆಳೆಯಬಹುದು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅಭ್ಯರ್ಥಿ ಆಯ್ಕೆಯ ಬಗ್ಗೆ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವುದರಿಂದ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದೆ.

ಹಾಲಿ ಎಂಎಲ್‌‍ಸಿಯನ್ನು ಹೊಂದಿರುವುದರಿಂದ ನೈರುತ್ಯ ಶಿಕ್ಷಕರ ಕ್ಷೇತ್ರದ ಸ್ಥಾನವನ್ನು ಜೆಡಿಎಸ್‌‍ಗೆ ತ್ಯಾಗ ಮಾಡುವುದನ್ನು ಬಿಟ್ಟು ಬಿಜೆಪಿಗೆ ಬೇರೆ ದಾರಿಯಿಲ್ಲದಿದ್ದರೂ, ಕನಿಷ್ಠ ಪಕ್ಷ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್‌, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹೋಗಬೇಕಿತ್ತು ಎಂದು ಕೇಸರಿ ಪಕ್ಷದ ಅನೇಕರು ಭಾವಿಸಿದ್ದಾರೆ.

ಲಿಂಗಾಯತ ಸಮುದಾಯದವರಾಗಿರುವ ಸರ್ಜಿ ಅವರು ಪಕ್ಷಕ್ಕೆ ಹೊಸಬರಾಗಿದ್ದರೂ ಲಿಂಗಾಯತ ಪ್ರಬಲ ನಾಯಕ ಯಡಿಯೂರಪ್ಪನವರ ಆಶೀರ್ವಾದದಿಂದ ಟಿಕೆಟ್‌ ಪಡೆಯಲು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರ ನಿರ್ಲಕ್ಷ್ಯವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ದೊಡ್ಡ ವರ್ಗದಲ್ಲಿ ಆತಂಕ ಉಂಟುಮಾಡಿದೆ. ವಿಶೇಷವಾಗಿ ಪಕ್ಷದ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ. ನಳೀನ್‌ಕುಮಾರ್‌ ಕಟೀಲ್‌ ಅವರ ಬದಲಿಗೆ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಾ ಅವರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದಾಗ ಪಕ್ಷದಲ್ಲಿ ಅತೃಪ್ತಿ ಶುರುವಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಹೆಸರು ಹೇಳಲು ಬಯಸುವ ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್‌‍ನ ಎಸ್‌‍.ಪಿ.ದಿನೇಶ್‌ ಈ ಹಿಂದೆ ಎರಡು ಬಾರಿ ಪಕ್ಷದ ಅಭ್ಯರ್ಥಿಯಾಗಿ ಸೋಲು ಕಂಡರೂ ಅಧಿಕ ಮತ ಗಳಿಸಿದ್ದರು. ಈ ಬಾರಿಯೂ ತಮಗೆ ಟಿಕೆಟ್‌ ಸಿಕ್ಕುವ ಭರವಸೆಯಲ್ಲಿ ಅವರು ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಈಗಾಗಲೆ ಮತದಾರರಿಗೆ ಮೂರ್ನಾಲ್ಕು ಬಾರಿ ಕರಪತ್ರಗಳನ್ನು ರವಾನಿಸಿದ್ದಾರೆ. ಎಲ್ಲ ಪದವೀಧರ ಕ್ಷೇತ್ರದ ಮತದಾರರಿಗೆ ಗುರುತಿನ ಚೀಟಿಯನ್ನು ಕಳುಹಿಸಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಮತದಾರರೊಂದಿಗೆ ಇಟ್ಟುಕೊಂಡಿದ್ದ ನಿಕಟ ಸಂಪರ್ಕ ಮತ್ತು ಎರಡು ಬಾರಿ ಅನುಭವಿಸಿದ ಸೋಲಿನ ಕರುಣೆ ಸೃಷ್ಟಿಯಾದಲ್ಲಿ ಕಾಂಗ್ರೆಸ್‌‍ ಮತ ಬ್ಯಾಂಕ್‌‍ಗೆ ಪೆಟ್ಟು ನೀಡಬಹುದು ಎಂದು ಹೇಳಲಾಗುತ್ತಿದೆ.

ಈಶ್ವರಪ್ಪ ಬೆಂಬಲ:ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ವಂಚಿತ ಮಾಜಿ ಶಾಸಕ ರಘುಪತಿಭಟ್‌ ಈ ಬಾರಿ ಪದವೀಧರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಶಿಕ್ಷಕರ ಕ್ಷೇತ್ರವನ್ನು ಮಿತ್ರಪಕ್ಷ ಜೆಡಿಎಸ್‌‍ನ ಹಾಲಿ ಸದಸ್ಯ ಎಸ್‌‍.ಎಲ್‌‍.ಭೋಜೇಗೌಡರಿಗೆ ಬಿಟ್ಟು ಕೊಡುವುದರಿಂದ ಪದವೀಧರ ಕ್ಷೇತ್ರದಲ್ಲಿ ಕರಾವಳಿ ಕೋಟಾದಡಿ ತಮಗೆ ಸಿಗುತ್ತದೆ ಎಂದು ಭಾವಿಸಿದ್ದರು.

ಹೀಗಾಗಿ ಮತದಾರರ ಪಟ್ಟಿಗೆ ಅಧಿಕ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದರು. ಲೋಕಸಭೆ ಚುನಾವಣೆ ಪ್ರಚಾರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ, ಬಿಜೆಪಿ ಮುಖಂಡರು ಹೊಸ ಮುಖ ಡಾ. ಧನಂಜಯ ಸರ್ಜಿಗೆ ಅವಕಾಶ ಮಾಡಿಕೊಟ್ಟಿರುವುದು ಅವರಲ್ಲಿತೀವ್ರ ಅಸಮಾಧಾನ ಮೂಡಿಸಿದೆ.

ಎರಡೂ ಕ್ಷೇತ್ರಗಳ ಚುನಾವಣೆಯಲ್ಲಿ ಕರಾವಳಿಯಿಂದ ಬಿಜೆಪಿ ಅಭ್ಯರ್ಥಿ ಇಲ್ಲಎಂಬುದನ್ನೇ ಮುಂದಿಟ್ಟುಕೊಂಡು ಅವರು ಪಕ್ಷದ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರ ಆಸ್ಪತ್ರೆ ರಸ್ತೆಯಲ್ಲೇ ತಮ ಚುನಾವಣೆ ಕಚೇರಿಯನ್ನೂ ತೆರೆದಿದ್ದಾರೆ. ಇದರ ಮಧ್ಯೆ ಮಾಜಿ ಡಿಸಿಎಂ ಕೆ.ಎಸ್‌‍.ಈಶ್ವರಪ್ಪ ಅವರು ರಘುಪತಿ ಭಟ್‌ ಅವರಿಗೆ ಬೆಂಬಲ ಘೋಷಿಸಿದ್ದು, ಕಾರ್ಯಕರ್ತರ ಸಭೆ ಸಹ ನಡೆಸಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‌‍ ಅಭ್ಯರ್ಥಿ ಕೊಡಗಿನ ಕೆ.ಕೆ.ಮಂಜುನಾಥ ಕುಮಾರ್‌ ಅಲ್ಲದೆ ಚಿಕ್ಕಮಗಳೂರಿನ ಮಂಜುನಾಥ.ಕೆ.ಕೆ ಕಣದಲ್ಲಿದ್ದಾರೆ. ಇದು ಮತದಾರರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಯೂ ಇದೆ.

RELATED ARTICLES

Latest News