ಬೆಂಗಳೂರು,ಅ.19- ಜಾತಿ ಜನಗಣತಿಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ವಿಚಾರವಾಗಿ ಪರಿಶಿಷ್ಟ ಸಮುದಾಯದ ಮುಖಂಡರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಗೃಹಕಚೇರಿ ಕೃಷ್ಣದಲ್ಲಿಂದು ಎಡಗೈ ಸಮುದಾಯದ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮಾಪುರ್, ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಸಚಿವರಾದ ಆಂಜನಯ್ಯ, ಶಿವಣ್ಣ, ವಿಧಾನಪರಿಷತ್ ಸದಸ್ಯ ಡಾ.ತಿಮಯ್ಯ, ಶಾಸಕ ಬಸಂತಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುಪ್ರೀಂಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಒಳಮೀಸಲಾತಿ ನೀಡಲು ರಾಜ್ಯಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದ್ದು, ಅದರ ಅನುಸಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಪಂಗಡಗಳಿಗೆ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದ್ದರು.
ಹಲವು ದಶಕಗಳ ಈ ಬೇಡಿಕೆ ಉದ್ದೇಶಪೂರಕವಾಗಿಯೇ ಕಡೆಗಣಿಸಲ್ಪಟ್ಟಿದೆ. ರಾಜಕೀಯವಾಗಿ ಎಲ್ಲಾ ಪಕ್ಷಗಳೂ ಈ ವಿಚಾರವನ್ನು ಮುಂದಿಟ್ಟುಕೊಂಡು ಸಮುದಾಯವನ್ನು ದಿಕ್ಕು ತಪ್ಪಿಸುತ್ತಿವೆ. ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿ ಒಳಮೀಸಲಾತಿ ಕಲ್ಪಿಸುವ ಭರವಸೆ ನೀಡಿತ್ತು. ಅದರ ಅನುಸಾರ ಸರ್ಕಾರ ಬಂದ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಜನರಿಗೆ ಕೊಟ್ಟ ಮಾತಿನ ಪ್ರಕಾರ ಸರ್ಕಾರ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದೆ. ಆ ವೇಳೆಗೆ ನಾವು ಜನರಿಗೆ ಮುಖ ತೋರಿಸಬೇಕಿದೆ. ಒಳಮೀಸಲಾತಿಯನ್ನು ಜಾರಿಗೊಳಿಸಲೇಬೇಕು ಎಂದು ನಾಯಕರು ಪ್ರತಿಪಾದಿಸಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು , ಈ ಹಿಂದಿನ ಸರ್ಕಾರ ಒಳಮೀಸಲಾತಿ ವಿಚಾರವಾಗಿ ತೆಗೆದುಕೊಂಡ ನಿರ್ಧಾರಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿಲ್ಲ. ಸುದೀರ್ಘವಾದ ಹೋರಾಟ ಮತ್ತು ಬೇಡಿಕೆಗೆ ಸ್ಪಂದಿಸಿ ನಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಒಳಮೀಸಲಾತಿ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವೂ ಬೆಂಬಲಿತವಾಗಿದೆ ಎಂದಿದ್ದಾರೆ.
ಹಿಂದುಳಿದ ವರ್ಗಗಳಿಗೆ ಶಾಶ್ವತ ಆಯೋಗದ ವತಿಯಿಂದ ನಡೆಸಲಾಗಿರುವ ಜಾತಿ ಜನಗಣತಿ ವರದಿಯನ್ನು ಅನುಷ್ಠಾನಕ್ಕೆ ತಂದರೆ ಒಳಮೀಸಲಾತಿ ಕಲ್ಪಿಸಲು ವೈಜ್ಞಾನಿಕವಾದ ದತ್ತಾಂಶಗಳು ಲಭ್ಯವಾಗುತ್ತವೆ. ನ್ಯಾಯಾಲಯವು ಅದನ್ನು ಪುರಸ್ಕರಿಸುತ್ತದೆ. ಮುಂದಿನ ದಿನಗಳಲ್ಲಿ ಈ ಸಂಬಂಧವಾಗಿ ಎದುರಾಗಬಹುದಾದ ಆಕ್ಷೇಪಗಳಿಗೆ ಸಮುದಾಯ ಸರ್ಕಾರದ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.