ಇಸ್ಲಾಮಾಬಾದ್, ಡಿ.31- ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ತನ್ನ ಸಹೋದರನ ಪುತ್ರನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮುನೀರ್ ಪುತ್ರಿ ಮಹ್ನೂರ್ ಡಿ.26 ರಂದು ತಮ ಸೋದರಸಂಬಂಧಿ ಅಬ್ದುಲ್ ರೆಹಮಾನ್ ಅವರೊಂದಿಗೆ ವಿವಾಹವಾಗಿದ್ದಾರೆ.
ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಸೇನಾ ಪ್ರಧಾನ ಕಚೇರಿಯಲ್ಲಿ ವಿವಾಹ ನಡೆಯಿತು ಎಂದು ತಿಳಿದುಬಂದಿದೆ. ದೇಶದ ಉನ್ನತ ರಾಜಕೀಯ ನಾಯಕರು ಮತ್ತು ಮಿಲಿಟರಿ ವ್ಯಕ್ತಿಗಳು ಇದರಲ್ಲಿ ಭಾಗವಹಿಸಿದ್ದರು. ಆದಾಗ್ಯೂ, ಸಮಾರಂಭವನ್ನು ರಹಸ್ಯವಾಗಿಡಲಾಗಿತ್ತು. ಯಾವುದೇ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಲಾಗಿರಲಿಲ್ಲ.
ವಿವಾಹದಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶೆಹಬಾಜ್ ಷರೀಫ್, ಉಪ ಪ್ರಧಾನಿ ಇಶಾಕ್ ದಾರ್, ಐಎಸ್ಐ ಮುಖ್ಯಸ್ಥ ಮತ್ತು ನಿವೃತ್ತ ಜನರಲ್ಗಳು ಮತ್ತು ಮಾಜಿ ಮುಖ್ಯಸ್ಥರು ಸೇರಿದಂತೆ ಪಾಕಿಸ್ತಾನಿ ಸೇನೆಯ ಇತರ ಸದಸ್ಯರು ಭಾಗವಹಿಸಿದ್ದರು.
ಅಸಿಮ್ ಮುನೀರ್ ಅವರ ಸೋದರಳಿಯ ಅಬ್ದುಲ್ ರೆಹಮಾನ್ ಕೂಡ ಪಾಕಿಸ್ತಾನಿ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರು. ನಂತರ ಸೇನಾ ಅಧಿಕಾರಿಗಳಿಗೆ ಮೀಸಲಾದ ಕೋಟಾದ ಮೂಲಕ ನಾಗರಿಕ ಸೇವೆಗಳಿಗೆ ಸೇರಿದರು. ಪ್ರಸ್ತುತ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮದುವೆಗೆ 400 ಅತಿಥಿಗಳು ಆಗಮಿಸಿದ್ದರು. ವಿವಾಹ ಸಮಾರಂಭವನ್ನು ಭದ್ರತಾ ಕಾರಣಗಳಿಂದಾಗಿ ಗೌಪ್ಯವಾಗಿಡಲಾಗಿತ್ತು. ಮುನೀರ್ ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಇದು ಅವರ ಮೂರನೇ ಮಗಳ ಮದುವೆಯಾಗಿದೆ.
