ವಾಷಿಂಗ್ಟನ್,ಜ.8- ಭಾರತದ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಅಧಿಕಾರ ನೀಡುವ ಮಸೂದೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಉದ್ದೇಶಪೂರ್ವಕವಾಗಿ ಖರೀದಿಸುವ ರಾಷ್ಟ್ರಗಳ ಮೇಲೆ ಶೇ. 500 ರಷ್ಟು ಸುಂಕವನ್ನು ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಅಧಿಕಾರ ನೀಡಲು ಈ ಮಸೂದೆ ಸಹಕಾರಿಯಾಗಲಿದೆ.
ರಷ್ಯಾವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಈ ಮಸೂದೆಯನ್ನು ಅಮೆರಿಕ ಸಿದ್ಧಪಡಿಸಿದೆ. ಮಸೂದೆ ಅಂಗೀಕಾರವಾದರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತ, ಚೀನಾ, ಬ್ರೆಜಿಲ್ ಮೇಲೆ ಅಮೆರಿಕ ಭಾರೀ ಪ್ರಮಾಣದ ತೆರಿಗೆ ವಿಧಿಸುವ ಸಾಧ್ಯತೆಯಿದೆ.
ರಿಪಬ್ಲಿಕನ್ ಪಕ್ಷದ ಸೆನೆಟರ್ ಗ್ರಹಾಂ ಬಿಲ್ ಈ ಮಸೂದೆಯ ಬಗ್ಗೆ ಟ್ರಂಪ್ ಜೊತೆ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಪೋಸ್ಟ್ ಮಾಡಿದ ಅವರು, ವಿವಿಧ ವಿಷಯಗಳ ಕುರಿತು ಟ್ರಂಪ್ ಅವರೊಂದಿಗೆ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ದ್ವಿಪಕ್ಷೀಯ ರಷ್ಯಾ ನಿರ್ಬಂಧ ಮಸೂದೆ ಮಂಡಿಸಲು ಅವರು ಹಸಿರು ನಿಶಾನೆ ನೀಡಿದ್ದಾರೆ ಎಂದು ಹೇಳಿದರು.
ಈ ಮಸೂದೆಯು ಚೀನಾ, ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳ ವಿರುದ್ಧ ಅಧ್ಯಕ್ಷ ಟ್ರಂಪ್‌ಗೆ ಭಾರೀ ಪ್ರಮಾಣದ ತೆರಿಗೆ ವಿಧಿಸಲು ಅನುಮತಿ ನೀಡುತ್ತದೆ. ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಪುಟಿನ್ ರಕ್ತಪಾತಕ್ಕೆ ಹಣಕಾಸು ಒದಗಿಸುತ್ತದೆ. ಮುಂದಿನ ವಾರದ ಆರಂಭದಲ್ಲಿ ನಡೆಯುತ್ತಿರುವ ಮತದಾನಕ್ಕೆ ನಾನು ಎದುರು ನೋಡುತ್ತಿದ್ದೇನೆ ಎಂದು ಗ್ರಹಾಂ ಬಿಲ್ ಬರೆದುಕೊಂಡಿದ್ದಾರೆ.
ಅಧಿಕಾರಕ್ಕೆ ಬರುವ ಮೊದಲೇ ಟ್ರಂಪ್ ಅವರು ರಷ್ಯಾ ಉಕ್ರೇನ್ ಯುದ್ಧವನ್ನು ನಿಲ್ಲಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಹಲವು ಸುತ್ತಿನ ಮಾತುಕತೆ ನಡೆದರೂ ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಈಗ ಯುದ್ಧ ನಿಲ್ಲಿಸಲು ಟ್ರಂಪ್ ರಷ್ಯಾ ಮಿತ್ರ ದೇಶಗಳ ಮೇಲೆ ತೆರಿಗೆ ಬೆದರಿಕೆ ಹಾಕಲು ಮುಂದಾಗಿದ್ದಾರೆ.
ಟ್ರಂಪ್ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ ಶೇ.25ರಷ್ಟು ದಂಡದ ರೂಪದಲ್ಲಿ ಸುಂಕ ಹೇರಿದ್ದಾರೆ. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ ಶೇ. 50ರಷ್ಟು ಸುಂಕ ಹೇರಲಾಗಿದೆ.
