ಢಾಕಾ, ಜ.6- ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದಿನಸಿ ಅಂಗಡಿಯ ಮಾಲೀಕ ಹಿಂದೂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ.
ಇದು ಬಾಂಗ್ಲಾದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡನೇ ಹಿಂದೂ ವ್ಯಕ್ತಿಯನ್ನು ಕೊಂದಿರುವ ಘಟನೆಯಾಗಿದೆ. ಧರ್ಮಾಂಧರಿಗೆ ಬಲಿಯಾದ ವ್ಯಕ್ತಿಯನ್ನು ಮೋನಿ ಚಕ್ರವರ್ತಿ ಎಂದು ಗುರುತಿಸಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯಲ್ಲಿ ಅವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಗೂ ಕೆಲವು ಗಂಟೆಗಳ ಮೊದಲು, ಜಶೋರ್ ಜಿಲ್ಲೆಯಲ್ಲಿ ಕಾರ್ಖಾನೆ ಮಾಲೀಕರು ಹಾಗೂ ಪತ್ರಿಕೆಯೊಂದರ ಹಂಗಾಮಿ ಸಂಪಾದಕರೂ ಆಗಿದ್ದ ರಾಣಾ ಪ್ರತಾಪ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.
ನೆರೆಯ ಕೇಶಬ್‌ಪುರ ಉಪ ಜಿಲ್ಲೆಯ ಶಾಲಾ ಶಿಕ್ಷಕನ ಮಗ ಪ್ರತಾಪ್ ಎರಡು ವರ್ಷಗಳಿಂದ ಕೊಪಾಲಿಯಾ ಬಜಾರ್‌ನಲ್ಲಿ ಐಸ್ ಕಾರ್ಖಾನೆಯನ್ನು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ಸಂಜೆ ಕೆಲವು ವ್ಯಕ್ತಿಗಳು ಅವರನ್ನು ಐಸ್ ಫ್ಯಾಕ್ಟರಿಯಿಂದ ಹೊರಗೆ ಕರೆದೊಯ್ದು ಗುಂಡು ಹಾರಿಸಿದ್ದಾರೆ. ಪ್ರತಾಪ್ ದೇಹದ ಪಕ್ಕದಲ್ಲಿ ಏಳು ಗುಂಡುಗಳು ಪತ್ತೆಯಾಗಿವೆ.
ತಲೆಗೆ ಮೂರು ಬಾರಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಕೋರರು ಬೈಕ್‌ನಲ್ಲಿ ಬಂದು ಪ್ರತಾಪ್ ಜೊತೆ ವಾಗ್ವಾದ ನಡೆಸಿ, ತಲೆಗೆ ಹಲವಾರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
