ವಿಶ್ವಸಂಸ್ಥೆ, ಡಿ. 23 (ಪಿಟಿಐ) – ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ ಸೇರಿದಂತೆ ಅಲ್ಲಿನ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದ್ದಾರೆ.ಹೌದು, ಬಾಂಗ್ಲಾದೇಶದಲ್ಲಿ ನಾವು ಕಂಡಿರುವ ಹಿಂಸಾಚಾರದ ಬಗ್ಗೆ ನಮಗೆ ತುಂಬಾ ಕಳವಳವಿದೆ ಎಂದು ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜಾರಿಕ್ ತಮ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ವಿಶೇಷವಾಗಿ ಕಳೆದ ಕೆಲವು ದಿನಗಳಲ್ಲಿ ಹಿಂದೂಗಳ ಮೇಲೆ ನಡೆದ ಗುಂಪು ಹಲ್ಲೆಗಳಿಗೆ ಪ್ರಧಾನ ಕಾರ್ಯದರ್ಶಿಯ ಪ್ರತಿಕ್ರಿಯೆಯ ಕುರಿತಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.ಅದು ಬಾಂಗ್ಲಾದೇಶದಲ್ಲಾಗಲಿ ಅಥವಾ ಬೇರೆ ಯಾವುದೇ ದೇಶವಾಗಲಿ, ಬಹುಸಂಖ್ಯಾತಕ್ಕೆ ಸೇರದ ಜನರು ಸುರಕ್ಷಿತವಾಗಿರಬೇಕು ಮತ್ತು ಎಲ್ಲಾ ಬಾಂಗ್ಲಾದೇಶಿಗಳು ಸುರಕ್ಷಿತವಾಗಿರಬೇಕು. ಮತ್ತು ಪ್ರತಿಯೊಬ್ಬ ಬಾಂಗ್ಲಾದೇಶಿಯರನ್ನು ಸುರಕ್ಷಿತವಾಗಿರಿಸಲು ಸರ್ಕಾರವು ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಡುಜಾರಿಕ್ ಹೇಳಿದರು.
ಕಳೆದ ವಾರ ಮೈಮೆನ್‌ಸಿಂಗ್‌ನ ಬಲುಕಾದಲ್ಲಿ ದೇವದೂಷಣೆ ಆರೋಪದ ಮೇಲೆ 25 ವರ್ಷದ ಗಾರ್ಮೆಂಟ್ ಕಾರ್ಖಾನೆಯ ಕೆಲಸಗಾರ ದೀಪು ಚಂದ್ರ ದಾಸ್‌ನನ್ನು ಗುಂಪೊಂದು ಹೊಡೆದು ಕೊಂದು, ಅವರ ದೇಹವನ್ನು ಬೆಂಕಿ ಹಚ್ಚಿತ್ತು.
ದಾಸ್ ಅವರ ಹತ್ಯೆಗೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ. ಇತ್ತೀಚಿನ ಬಂಧನಗಳೊಂದಿಗೆ, ಕೊಲೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮತ್ತು ರಾಪಿಡ್ ಆಕ್ಷನ್ ಬೆಟಾಲಿಯನ್ ಮೂಲಗಳನ್ನು ಉಲ್ಲೇಖಿಸಿ ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.
