ಬೆಂಗಳೂರು,ಸೆ.21- ಪ್ರತಿ ತಿಂಗಳು ನಡೆಸುವ ಎರಡು ಸಾರ್ವಜನಿಕ ಸಭೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಅಹ್ವಾನಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಗರುಡಾಚಾರ್ ಪಾಳ್ಯದ ಐಟಿಪಿಎಲ್ ರಸ್ತೆಯಲ್ಲಿರುವ ಎಂಎಲ್‌ಆರ್ ಕನ್ವೆಷನ್ ಸೆಂಟರ್‌ನಲ್ಲಿಂದು ಹಮಿಕೊಂಡಿದ್ದ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನಾವು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.
ತಿಂಗಳ 2ನೇ ಶನಿವಾರ ಮಾಸಿಕ ಜನ ಸಂಪರ್ಕ ದಿವಸ ಹಾಗೂ 4ನೇ ಶನಿವಾರ ನಡೆಯುವ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮಗಳು ಇಂತಹ ಕಡೆ ನಡೆಯುತ್ತವೆ ಎಂದು ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆದು ತಿಳಿಸಿದ್ದೇವೆ. ಮುಂದೆ ನಡೆಯುವ ಈ ಎರಡೂ ಕಾರ್ಯಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಫುಟ್‌ಪಾತ್‌ಗಳಲ್ಲಿ , ಮನೆಗಳ ಮುಂದೆ ಹಾಗೂ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ತಿಂಗಳಾದರೂ ತೆಗೆಯುವುದಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಸಭೆಯಲ್ಲಿ ಹೇಳಿದಾಗ, ಪೂರ್ವ ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಭರವಸೆ ಕೊಟ್ಟರು.
ಪ್ರತಿ ಸಭೆಯಲ್ಲೂ ಪೊಲೀಸರು ಮಾತ್ರ ಇರುತ್ತಾರೆ. ಸಂಬಂಧಿಸಿದ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಬಂದರೆ ತಮ ಸಮಸ್ಯೆಯನ್ನು ಅವರ ಮುಂದೆ ಹೇಳಿಕೊಳ್ಳಬಹುದು. ಹಾಗಾಗಿ ಸಭೆಗಳಿಗೆ ಅವರನ್ನು ಕರೆಸುವಂತೆ ಸಾರ್ವನಿಕರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್.ಜೈನ್ ಉಪಸ್ಥಿತರಿದ್ದರು.