ನವದೆಹಲಿ,ಫೆ.15- ಐಪಿಎಲ್ ಸೀಸನ್ 18ಕ್ಕೆ ದಿನಾಂಕ ಘೋಷಣೆಯಾಗಿದೆ. ಈ ಬಾರಿಯ ಐಪಿಎಲ್ ಪಂದ್ಯಗಳು ಮಾರ್ಚ್ 22 ರಿಂದ ಶುರುವಾಗಲಿವೆ. ಮಾ.22 ರಿಂದ ಮೇ 25 ರವರೆಗೆ ದೇಶದ ವಿವಿಧ ರಾಜ್ಯಗಳ ಕ್ರೀಡಾಂಗಣಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ. ವಿಶೇಷ ಎಂದರೆ ಈ ಬಾರಿಯ ಉದ್ಘಾಟನಾ ಮತ್ತು ಫೈನಲ್ ಪಂದ್ಯಗಳನ್ನು ಕೊಲ್ಕತ್ತಾದಲ್ಲಿ ಆಯೋಜಿಸಲಾಗಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮಾರ್ಚ್ 22 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಕಳೆದ ಬಾರಿಯ ರನ್ನರ್ ಅಪ್ ಸನ್ ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯವನ್ನು ತವರಿನಲ್ಲಿ ಆಡಲು ನಿರ್ಧರಿಸಿದೆ. ಅದರಂತೆ ಮಾರ್ಚ್ 23 ರಂದು ಉಪ್ಪಲ್ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯು 10 ನಿಯಮಿತ ಕೇಂದ್ರಗಳಾದ ಅಹಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು, ಲಕ್ಷ್ಮೀ, ಮುಲ್ಲನ್‌ಪುರ, ದೆಹಲಿ, ಕೊಲ್ಕತ್ತಾ, ಹೈದರಾಬಾದ್ ಮತ್ತು ಜೈಪುರದಲ್ಲಿ ನಡೆಯಲಿದ್ದು, ಇದರ ಜೊತೆಗೆ ಗುವಾಹಟಿ ಮತ್ತು ಧರ್ಮಶಾಲಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಪಂದ್ಯಗಳು ನಡೆದರೆ, ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ.
ಹಾಗೆಯೇ ಈ ಬಾರಿಯ ಫೈನಲ್ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯವು ಮೇ 25 ರಂದು ನಡೆಸಲು ನಿರ್ಧರಿಸಲಾಗಿದೆ. ಇದೀಗ ಆರಂಭಿಕ ದಿನಾಂಕ ಮತ್ತು ಫೈನಲ್ ದಿನಾಂಕಗಳನ್ನು ಒಳಗೊಂಡಂತೆ ತಾತ್ಕಾಲಿಕ ವೇಳಾಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳಿಗೆ ಕಳುಹಿಸಿಕೊಡಲಾಗಿದೆ. ಹೀಗಾಗಿ ಐಪಿಎಲ್ ಸೀಸನ್ -18 ಬರುವ ಮಾರ್ಚ್ 22 ಮತ್ತು ಮೇ 25 ರೊಳಗೆ ನಡೆಯುವುದು ಬಹುತೇಕ ಖಚಿತ ಎನ್ನಬಹುದು.