ಬೆಂಗಳೂರು, ಅ.29- ಮಹತ್ತರ ಬೆಳವಣಿಗೆಯಲ್ಲಿ 2025ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮತ್ತೆ ಮಾಜಿ ನಾಯಕ , ರನ್ ಮೆಷಿನ್ ವಿರಾಟ್ ಕೊಹ್ಲಿ ಅವರೇ ಮುನ್ನಡೆಸಲಿದ್ದಾರೆ ಎಂಬ ಅಚ್ಚರಿ ಸಂಗತಿ ಹೊರಬಿದ್ದಿದೆ.
2025ರ ಐಪಿಎಲ್ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಫ್ ಡುಪ್ಲೆಸಿಸ್ ಅವರನ್ನು ತಂಡದಿಂದ ಹೊರಗಿಡುವುದು ಬಹುತೇಕ ಖಚಿತವಾಗಿದ್ದು , ಮೆಗಾ ಹರಾಜಿನಲ್ಲಿ ಫ್ರಾಂಚೈಸಿ ಬಯಸಿದ ಆಟಗಾರರನ್ನು ತಂಡಕ್ಕೆ ಕರೆತರುವಲ್ಲಿ ವಿಫಲರಾದರೆ, ಕೊಹ್ಲಿ ಅವರ ಹೆಗಲಿಗೆ ಮತ್ತೊಮೆ ಕ್ಯಾಪ್ಟನ್ಸಿ ಹೊರೆ ಬೀಳಲಿದೆ.
ಅಕ್ಟೋಬರ್ 31ರೊಳಗೆ 18ನೇ ಆವೃತ್ತಿಯ ಸಲುವಾಗಿ ಮಾಲೀಕರು ತಮ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ. ಈಗಾಗಲೇ 2016ರ ಚಾಂಪಿಯನ್ ಸನ್‌ರೈಸರ್ಸ್ ಹೈದ್ರಾಬಾದ್ ತಂಡವು ತಮ ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದು , ಕಳೆದ ವರ್ಷ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಪ್ಯಾಟ್ ಕಮಿನ್ಸ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ.
ಬಿಸಿಸಿಐನ ಹೊಸ ನಿಯಮ ಗಳಿಂದಾಗಿ ರಿಷಭ್‌ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಅವರನ್ನು ತಂಡದಿಂದ ಹೊರಗಿಡುವುದರಿಂದ ಹೊಸ ನಾಯಕನ ತಲಾಷೆಯಲ್ಲಿ ಮಾಲೀಕರು ಮುಳುಗಿದ್ದಾರೆ.
ಆರ್‌ಸಿಬಿಗೆ ಬರ್ತಾರಾ ರಾಹುಲ್:
2016ರ ಐಪಿಎಲ್ ಫೈನಲ್ ನಂತರ ಆರ್‌ಸಿಬಿ ತಂಡದಿಂದ ಹೊರಗುಳಿದಿರುವ ಕನ್ನಡಿಗ ಕೆ.ಎಲ್.ರಾಹುಲ್ ಅವರು 18ನೇ ಸೀಸನ್‌ನಲ್ಲಿ ಆರ್‌ಸಿಬಿಗೆ ಬರುತ್ತಾರೆ, ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸುದ್ದಿಗಳು ಜೋರಾಗಿವೆ. ಅಲ್ಲದೆ ಫಾಫ್ ಡುಪ್ಲೆಸಿಸ್‌ಗೆ 40ಕ್ಕೂ ಹೆಚ್ಚು ವಯಸ್ಸಾಗಿದ್ದು ಅವರನ್ನು ತಂಡದಿಂದ ಗೇಟ್‌ಪಾಸ್ ನೀಡುವುದು ಬಹುತೇಕ ಖಚಿತವಾಗಿದೆ.
ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ಸಿ?
ಮೆಗಾಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಲೆಕ್ಕಾಚಾರ ಹಾಕಿದಂತೆ ಆಟಗಾರರನ್ನು ಖರೀದಿಸಲು ವಿಫಲರಾದರೆ ಆಗ ತಂಡದ ನಾಯಕತ್ವ ವಿರಾಟ್ ಕೊಹ್ಲಿ ಹೆಗಲಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
2013 ರಿಂದ 2021ರವರೆಗೆ ಆರ್‌ಸಿಬಿ ತಂಡವನ್ನು ಯಶಸ್ವಿ ಯಾಗಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ 4 ಬಾರಿ ತಂಡವನ್ನು ಪ್ಲೇಆಫ್ ಹಂತಕ್ಕೆ ತಲುಪಿಸಿದ್ದರೆ, 2016ರಲ್ಲಿ ಎಸ್‌ಆರ್‌ಎಚ್ ವಿರುದ್ಧ ಸೋಲು ಕಂಡು ಚೊಚ್ಚಲ ಚಾಂಪಿಯನ್‌ಪಟ್ಟ ಕಳೆದುಕೊಂಡಿತ್ತು. ನಂತರ ಡುಪ್ಲೆಸಿಸ್ ಸಾರಥ್ಯ ವಹಿಸಿ ಎರಡು ಬಾರಿ ತಂಡವನ್ನು ಪ್ಲೇ ಆಫ್ ಹಂತ ತಲುಪಿಸಿದ್ದರು.