ಬೆಂಗಳೂರು,ಏ.7- ಸಿಲಿಕಾನ್ ಸಿಟಿ, ನಿವೃತ್ತರ ಸ್ವರ್ಗ ಎಂಬ ಖ್ಯಾತಿಯಿಂದ ಗಾರ್ಬೇಜ್ ಸಿಟಿ ಎಂಬ ಕುಖ್ಯಾತಿಗೂ ಒಳಗಾಗಿರುವ ಬೆಂಗಳೂರು ನಗರ ಇದೀಗ ಬೀದಿ ಕಾಮಣ್ಣರ ಸಿಟಿಯಾಗಿ ಮಾರ್ಪಾಡಾಗುತ್ತಿದೆಯೇ?
ಹೌದು, ನಗರದಲ್ಲಿ ನಡೆಯುತ್ತಿರುವ ಇತ್ತೀಚಿನ ಕೆಲ ಘಟನೆಗಳನ್ನು ನೋಡಿದರೆ ಬೆಂಗಳೂರು ಬೀದಿ ಕಾಮಣ್ಣರ ನಗರವಾಗುತ್ತಿದೆ ಎಂಬುದಕ್ಕೆ ಇಂಬು ನೀಡುತ್ತಿವೆ.ಸಿಲಿಕಾನ್ ಸಿಟಿಯ ಜನ ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಹಗಲು, ರಾತ್ರಿ ದುಡಿಯೋದು ಮಾಮೂಲು ಇಂತಹ ಜನರ ನಡುವೆ ಸೇರಿಕೊಂಡಿರುವ ಕೆಲ ಕಾಮುಕರ ಕಣ್ಣು ದುಡಿದು ಬದುಕುವ ಹೆಣ್ಣು ಮಕ್ಕಳ ಮೇಲೆ ಬಿದ್ದಿದೆ. ಹೀಗಾಗಿ ದುಷ್ಕರ್ಮಿಗಳು ಕೆಲವು ಯುವತಿಯರ ಜೊತೆ ಅನುಚಿತವಾಗಿ ವರ್ತಿಸುತ್ತಿರುವ ಘಟನೆಗಳು ಇತ್ತೀಚೆಗೆ ನಗರದಲ್ಲಿ ಹೆಚ್ಚಾಗುತ್ತಿವೆ.
ಏ.3 ರಂದು ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತಿ ಬಡಾವಣೆಯ ಒಂದನೇ ಕ್ರಾಸ್‌ನಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಯುವತಿಯರ ಜೊತೆ ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕ್ಯಾಮೆರಾದಲ್ಲಿ ಸೆರೆಯಾಗಿರುವ ಅನುಚಿತ ವರ್ತನೆಯ ದೃಶ್ಯಗಳ ಆಧಾರದ ಮೇಲೆ ಸ್ಥಳೀಯ ವ್ಯಕ್ತಿ ಲೋಕೇಶ್‌ಗೌಡ ಎನ್ನುವವರು ಕಿಡಿಗೇಡಿ ವಿರುದ್ಧ ಸದ್ದುಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ರೀತಿ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಬೆಳಗಿನ ಜಾವ 4.30 ರ ಸಮಯದಲ್ಲಿ ತನ್ನ ಸ್ನೇಹಿತೆ ಮನೆಯಿಂದ ತನ್ನ ಮನೆಗೆ ಸ್ಕೂಟಿಯಲ್ಲಿ ಹಿಂತಿರುಗುತ್ತಿದ್ದ 25 ವರ್ಷದ ಯುವತಿಗೆ ಬೈಕ್‌ನಲ್ಲಿ ಬಂದ ಇಬ್ಬರು ಬೀದಿ ಕಾಮಣ್ಣರು ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ.
ಈ ಸಂದರ್ಭದಲ್ಲಿ ಯುವತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆಗ ಸಹಾಯಕ್ಕೆ ಬಂದ ಸಾರ್ವಜನಿಕರಿಗೆ ಕಿಡಿಗೇಡಿಗಳು ಚಾಕು ತೋರಿಸಿ ಪರಾರಿಯಾಗಿದ್ದಾರೆ.ಇನ್ನು ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ಅಣ್ಣನ ಜತೆ ಬೆಳಗಿನ ಜಾವ 3.50 ರ ಸಮಯದಲ್ಲಿ ನಡೆದು ಹೋಗುತ್ತಿದ್ದ ಅಸ್ಸಾಂ ಮೂಲದ 19 ವರ್ಷದ ಯುವತಿ ಮೇಲೆ ಆಟೋ ಚಾಲಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಸಂತ್ರಸ್ತೆ ಜೊತೆಗಿದ್ದ ಆಕೆಯ ಸಹೋದರನ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಮಾಡಿದ. ಯುವತಿ ಮೇಲೆ ಮೃಗದಂತೆ ವರ್ತಿಸಿದ ಮತ್ತೊಬ್ಬ ಆಟೋ ಚಾಲಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ನಂತರ ಇಬ್ಬರೂ ಪರಾರಿಯಾಗಿದ್ದರು. ಸುದ್ದಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದರು.
ಬಿಟಿಎಂ ಲೇಔಟ್‌ನ ರಸ್ತೆಯಲ್ಲಿ ರೀಲ್‌್ಸ ಮಾಡುತ್ತ ನಡೆದು ಹೋಗುತ್ತಿದ್ದ ವ್ಲಾಗರ್ ಮೇಲೂ ಬೀದಿ ಕಾಮಣ್ಣನೊಬ್ಬ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ. ಇದರ ಜೊತೆ ಜಯನಗರ, ರಾಮಮೂರ್ತಿನಗರ ಮತ್ತಿತರ ಪ್ರದೇಶಗಳಲ್ಲೂ ಇದೇ ರೀತಿಯ ಹಲವಾರು ಅನುಚಿತ ಘಟನೆಗಳನ್ನು ಗಮನಿಸಿದರೆ ಸಿಲಿಕಾನ್ ಸಿಟಿ ಬೀದಿ ಕಾಮಣ್ಣರ ನಗರವಾಗಿ ಪರಿವರ್ತನೆಯಾಗುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ.
ನಗರದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳನ್ನು ನೋಡಿದರೆ ಕಾಮುಕರಿಗೆ ಪೊಲೀಸರ ಹಾಗೂ ಕಾನೂನಿನ ಭಯವೇ ಇಲ್ಲ ಎಂಬಂತೆ ಕಾಣುತ್ತದೆ. ಇನ್ನು ಮುಂದಾದರೂ ನಗರ ಪೊಲೀಸರು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಮೂಲಕ ನಗರಕ್ಕೆ ಬೀದಿ ಕಾಮಣ್ಣರ ಸಿಟಿ ಎಂಬ ಕಳಂಕ ಬಾರದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ.