ಬೆಂಗಳೂರು, ಅ.5- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡರೆ ನಾನೇಕೆ ಭಯ ಪಡಬೇಕು? ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನನ್ನನ್ನು ಕಂಡರೆ ಕುಮಾರಸ್ವಾಮಿ ಅವರಿಗೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು,ಯಾರಿಗೆ ಭಯ? ಸಿದ್ದರಾಮಯ್ಯ ಅವರು ದೆವ್ವವಾಗಿದ್ದರೆ ಭಯ ಬಿಳಬೇಕು. ಅವರು ದೆವ್ವ ಅಲ್ಲವಲ್ಲ? ಅವರು ಅಂದರೆ ನಾನು ಏಕೆ ಭಯ ಪಡಬೇಕು? ಕಾರಣವೇನಿದೆ? ಎಂದರು.
ನನ್ನನ್ನು ಹೆದರಿಸಲು ಅವರಿಗೆ ಆಗುತ್ತದೆಯೇ?ಯಾವುದೇ ಕಾರಣಕ್ಕೂ ಹೆದರಿಸಲು ಆಗಲ್ಲ. ಅದು ಯಾವುದೋ ಕೇಸ್ ಹಾಕಿಕೊಂಡು ನನ್ನನ್ನು ಹೆದರಿಸಲು ಆಗುತ್ತದೆಯೇ? ನಿನ್ನೆ ಕುಮಾರಸ್ವಾಮಿಗೆ ಬಂಧನದ ಭೀತಿ ಎಂದು ಹಾಕಿದ್ದೀರಾ. ನನಗೆ ಅದು ಯಾವುದೇ ಬಂಧನ ಬೀತಿಯೂ ಇಲ್ಲ. ದೇವರೇ ಕಾಪಾಡಬೇಕಪ್ಪ ! ಎಂದು ಟೀಕಿಸಿದರು.
ಕುಮಾರಸ್ವಾಮಿ ಯಾರಿಗೂ ಹೆದರುವುದಿಲ್ಲ. ಹೆದರುವುದು ಇದ್ದರೆ ದೇವರಿಗೆ ಮತ್ತು ಜನರಿಗೆ ಮಾತ್ರ. ಇಂತಹ ಸಿದ್ದರಾಮಯ್ಯನವರು ಲಕ್ಷ ಜನ ಬಂದರೂ ಹೆದರಲ್ಲ. ಹೆದರೋದು ನನ್ನನ್ನು ಬೆಳಸಿರುವ ನಾಡಿನ ಜನರಿಗೆ ಮಾತ್ರ. ನಾನು ರಾಜಕೀಯಕ್ಕೆ ಸಿದ್ದರಾಮಯ್ಯ ಅವರ ನೆರಳಿನಲ್ಲಿ ಬಂದಿದ್ದೇನೆಯೇ? ನನ್ನ ಸ್ವತಃ ದುಡಿಮೆ ಆಧಾರದ ಮೇಲೆ ಬಂದಿದ್ದೇನೆ. ಹಾಗೆ ನೋಡಿದರೆ ಸಿಎಂ ನಮ ಪಕ್ಷದ ಕಾರ್ಯಕರ್ತರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೆರಳಲ್ಲಿ ಬಂದ ಮನುಷ್ಯ ಎಂದು ಅವರು ವಾಗ್ದಾಳಿ ನಡೆಸಿದರು.
ಜೆಡಿಎಸ್ ಮುಂದೆ ದುರ್ಬಲವಾಗುತ್ತದೆಯೋ? ಬಲಗೊಳ್ಳುತ್ತದೆಯೋ ಎಂಬುದನ್ನು ಭಗವಂತ ತೀರ್ಮಾನ ಮಾಡುತ್ತಾನೆ. ಮೊದಲು ಸಮಸ್ಯೆಯಲ್ಲಿ ಇದ್ದೀರಲ್ಲಪ್ಪಾ, ಅದನ್ನು ಸರಿಪಡಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.
ಐದು ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ಇರುತ್ತಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಲ್ಲಿಗೆ ಯಾವ ತರದ ರಾಜಕಾರಣ ಇದೆ ನೋಡಿ. ಯಾರ್ಯಾರು ಯಾವ ಹೇಳಿಕೆ ಕೊಡುತ್ತಾರೆ, ಆ ಹೇಳಿಕೆ ಮೇಲೆ ನೀವು ತೀರ್ಮಾನಕ್ಕೆ ಬನ್ನಿ. ಇಲ್ಲಿ ಕುಮಾರಸ್ವಾಮಿ ಬಳಿ ಇವರದ್ದು ಯಾರದ್ದು ಏನೂ ನಡೆಯಲ್ಲ ಎಂದು ಹೇಳಿದರು.
ಎಫ್ಐಆರ್ ದಾಖಲಿಸಿ ಬೆದರಿಸುವ ತಂತ್ರನಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಬೆದರಿಕೆ ಅಲ್ದೆ ಇನ್ನೇನು? ಏನಿದೆ ಎಫ್ಐಆರ್ನಲ್ಲಿ?ಅದರ ಬಗ್ಗೆ ನಾನು ಚರ್ಚೆ ಮಾಡೋದು ಅನವಶ್ಯಕ. ಕಾಲವೇ ನಿರ್ಧಾರ ಮಾಡುತ್ತದೆ. ಪ್ರತಿಯೊಂದಕ್ಕೂ ಉತ್ತರ ನೀಡುತ್ತದೆ ಎಂದು ಕಿಡಿಕಾರಿದರು.
ಮುಡಾ ವಿಚಾರ ಡೈವರ್ಟ್ ಮಾಡಲು ಎಫ್ಐಆರ್ ಹಾಕಲಾಗಿದೆಯೇ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದೂ ಡೈವರ್ಟ್ ಮಾಡಲು ನಡೆಸುತ್ತಿರೋದು. ಈ ಸರ್ಕಾರ ಎಲ್ಲವನ್ನೂ ಬಿಟ್ಟಿರುವ ಸರ್ಕಾರ. ಯಾವ ಭಯ ಭಕ್ತಿಯೂ ಇಲ್ಲ, ಗೌರವವೂ ಇಲ್ಲ. ಇದು ಭಂಡ ಸರ್ಕಾರ. ಈ ಸರ್ಕಾರದ ಬಗ್ಗೆ ಚರ್ಚೆ ಮಾಡೋದರಲ್ಲಿ ಅರ್ಥ ಇಲ್ಲ. ಇವತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ಕಾಲವೇ ಉತ್ತರ ನೀಡುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.