ಮಂಗಳೂರು,ಮೇ4- ಮತಾಂಧರಿಂದ ಹತ್ಯೆಯಾದ ಸುಹಾಸ್ ಶೆಟ್ಟಿ ಮನೆಗೆ ಕಾಂಗ್ರೆಸ್‌ನ ಸಚಿವರು, ಶಾಸಕರು, ಮುಖಂಡರು ಭೇಟಿ ನೀಡಬಾರದು ಎಂದು ಮುಸ್ಲಿಂ ಮುಖಂಡರು ಧಮ್ಕಿ ಹಾಕಿರುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ನಿನ್ನೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿಗೆ ಭೇಟಿ ನೀಡಿದ್ದರು. ಅಲ್ಲಿಗೆ ಆಗಮಿಸಿದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಸಚಿವರ ಜೊತೆ ಪ್ರತ್ಯೇಕ ಚರ್ಚೆ ನಡೆಸಿದರು. ಈ ವೇಳೆ ಹಲವಾರು ವಿಚಾರಗಳು ಚರ್ಚೆಯಾಗಿದ್ದು, ಜಿಲ್ಲೆಯಲ್ಲಿ ಕೋಮು ದ್ವೇಷದ ಹತ್ಯೆಗಳನ್ನು ಹತ್ತಿಕ್ಕಬೇಕು. ಶಾಂತಿ ಸುವ್ಯವಸ್ಥೆ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಒತ್ತಾಯಿಸಿರುವುದಾಗಿ ಹೇಳಿಕೊಂಡಿದ್ದರು.
ಅದರ ಜೊತೆಯಲ್ಲಿ ಕಾಂಗ್ರೆಸ್‌ನ ಯಾವ ಪ್ರಮುಖ ನಾಯಕರೂ ಕೊಲೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಮನೆಗೆ ಭೇಟಿ ನೀಡಬಾರದು. ಒಂದು ವೇಳೆ ಭೇಟಿ ನೀಡಿದರೆ ನಾವು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಮುಸ್ಲಿಂ ಮುಖಂಡರು ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.
ಈ ಕುರಿತಂತೆ ಆಡಿಯೋವೊಂದು ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಪ್ರವಾಸಿಮಂದಿರಕ್ಕೆ ಗೃಹಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದರು. ನಾವು ಅವರನ್ನು ಭೇಟಿ ಮಾಡಲು ಹೋದಾಗ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಸುಹಾಸ್ ಶೆಟ್ಟಿ ಮನೆಗೆ ಯಾರೂ ಭೇಟಿ ನೀಡಬಾರದು ಎಂದು ಹೇಳಿದ್ದೇವೆ. ಇದಕ್ಕೆ ಅವರು ಸಕಾರಾತಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಆಡಿಯೋದಲ್ಲಿರುವ ಮಾತುಗಳನ್ನು ಕೇಳಿದರೆ ಈ ರೀತಿ ಮಾತನಾಡಿರುವುದು ಮುಸ್ಲಿಂ ಸಮುದಾಯದ ವ್ಯಕ್ತಿ ಎಂದು ಭಾವಿಸುವಂತಿದೆ. ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡದೇ ಹೋದುದಕ್ಕೆ ಸಮರ್ಥನೆ ನೀಡಿರುವ ಗೃಹಸಚಿವರು, ಇದೊಂದು ಕೊಲೆ ಪ್ರಕರಣ ಸುಹಾಸ್ ಶೆಟ್ಟಿ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು.
ಈ ಒಂದು ಕಾರಣಕ್ಕೆ ಚುನಾಯಿತ ಪ್ರತಿನಿಧಿಗಳು ಅವರ ಮನೆಗೆ ಭೇಟಿ ನೀಡಲಿಲ್ಲ ಎಂದು ಹೇಳಿದ್ದಾರೆ. ಆದರೆ ಆಡಿಯೋ ವೈರಲ್ ಆದ ಬಳಿಕ ಅಸಲಿ ಕಾರಣ ಬಯಲಿಗೆ ಬಂದಂತಾಗಿದೆ. ಮುಸ್ಲಿಂ ಮುಖಂಡರುಗಳ ಧಮ್ಕಿಗೆ ಬೆದರಿ ಸಚಿವರಾದ ಪರಮೇಶ್ವರ್ ಮತ್ತು ದಿನೇಶ್‌ಗುಂಡೂರಾವ್ ಹಾಗೂ ಶಾಸಕರು ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲಿಲ್ಲವೇ ಎಂಬ ಅನುಮಾನಗಳು ದೃಢವಾಗುತ್ತಿವೆ.
ಈ ಹಿಂದೆ ದಕ್ಷಿಣ ಕರ್ನಾಟಕ ಜಿಲ್ಲೆಯಲ್ಲಿ ಕೋಮುವಾಧಾರಿತ ಸರಣಿ ಹತ್ಯೆಗಳು ನಡೆದಿದ್ದವು. ಆದರೆ ಜಿಲ್ಲೆಗೆ ಭೇಟಿ ನೀಡಿದ ಆಗಿನ ಮುಖ್ಯಮಂತ್ರಿ ಬಸವರಾಜು ಬೊಮಾಯಿ, ಹತ್ಯೆಯಾದ ಒಂದು ಕೋಮಿನ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದು, ಮತ್ತೊಂದು ಕೋಮಿನ ವ್ಯಕ್ತಿಯ ಮನೆಗೆ ಭೇಟಿ ನೀಡದೇ ಇರುವ ಬಗ್ಗೆ ಟೀಕೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಯಿತು.
ಈಗ ಗೃಹಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಭೇಟಿ ನೀಡಿದ್ದು, ಕೊಲೆಯಾದವರ ಮನೆಗೆ ಹೋಗದೇ ವಾಪಸ್ ಬಂದಿದ್ದಾರೆ. ಕಳೆದ ವಾರ ಗುಂಪೊಂದು ಅಶೋಕ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿತ್ತು. ಮೇ 1 ರಂದು ಸುಹಾಸ್ ಶೆಟ್ಟಿಯ ಹತ್ಯೆಯಾಗಿದೆ. ಈ ಇಬ್ಬರು ವ್ಯಕ್ತಿಗಳ ಕುಟುಂಬದ ಸದಸ್ಯರನ್ನು ಭೇಟಿ ಮಾಡುವ ಗೋಜಿಗೆ ಜನಪ್ರತಿನಿಧಿಗಳು ಹೋಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ.