ಬೆಂಗಳೂರು, ಆ.12– ಬೆಳಗಿನಜಾವ ಬಿದ್ದ ಮಳೆಗೆ ಬೆಂಗಳೂರಿನ ಹಲವು ಕಡೆ ನೀರು ನಿಂತು ಜನರಿಗೆ ತೊಂದರೆಯಾಗಿದ್ದು, ಇದೇನಾ ಬ್ರ್ಯಾಂಡ್ ಬೆಂಗಳೂರು? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜೆಡಿಎಸ್ ಪ್ರಶ್ನಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ನೀರಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮುಳುಗಿದೆ. ಉಪ ಮುಖ್ಯಮಂತ್ರಿಗಳೇ ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು? ಉತ್ತರಿಸಿ ಬೆಂಗಳೂರು ನಗರಾಭಿವೃದ್ಧಿ ಸಚಿವರೇ ಎಂದು ಆಗ್ರಹಿಸಿದೆ.
ಕೇವಲ 3- ಗಂಟೆ ಸುರಿದ ಮಳೆಗೆ ಬೆಂಗಳೂರಿನ ಬಹುತೇಕ ಭಾಗ ಜಲಾವೃತವಾಗಿದೆ. ರಾಜಧಾನಿಯ ಹಲವೆಡೆ ಮನೆಗಳಿಗೆ, ಅಪಾರ್ಟ್ಮೆಂಟ್ಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುತಿದ್ದಾರೆ. ಇನ್ನು ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು, ಅಂಡರ್ ಪಾಸ್ಗಳು ಈಜು ಕೊಳದಂತಾಗಿವೆ.
ರಸ್ತೆಗಳು ಕೆರೆಯಂತಾಗಿದ್ದು, ಹಳ್ಳ, ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಚಲಿಸುವುದು ವಾಹನ ಸವಾರರಿಗೆ ನರಕ ಸದೃಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಆಸ್ತಿ ತೆರಿಗೆ ಹೆಚ್ಚಿಸಿ, ಸಾವಿರ ಕೋಟಿಗೂ ಹೆಚ್ಚು ಸಂಗ್ರಹಿಸಿರುವ ಹಣ ಏನಾಗಿದೆ? ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನು ಪ್ರಶ್ನಿಸಿದೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮಾಡಲು ನೀವು ತೋರಿದ ಉತ್ಸಾಹದ ಹುನ್ನಾರ ಸರ್ವ ವಿದಿತ. ಈಗ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಬರೀ ಸುಳ್ಳುಗಳನ್ನು ಹೇಳುತ್ತಲೇ ಬೆಂಗಳೂರಿನ ಜನರಿಗೆ ಮಂಕುಬೂದಿ ಎರಚುತ್ತಿದ್ದೀರಿ ಅಷ್ಟೇ. ನಿಮ ಭ್ರಷ್ಟ ಸರ್ಕಾರ ಹಗರಣಗಳಲ್ಲೇ ಮುಳುಗಿರುವಾಗ ಜನಸಮಾನ್ಯರ ಬಗ್ಗೆ ಯೋಚಿಸಲು ಸಮಯ ಎಲ್ಲಿದೆ? ಎಂದು ಟೀಕಾ ಪ್ರಹಾರ ನಡೆಸಿದೆ.