ನವದೆಹಲಿ,ಅ.26- ಹಮಾಸ್ ವಿರುದ್ಧ ಕಾರ್ಯಾಚರಣೆ ಯಶಸ್ವಿಯಾದ ಬೆನ್ನಲ್ಲೇ ಇದೀಗ ಇಸ್ರೇಲ್ ಮತ್ತೊಂದು ದೇಶದ ವಿರುದ್ಧ ಯುದ್ಧಕ್ಕೆ ನಿಂತಿದೆ. ಈ ತಿಂಗಳ ಆರಂಭದಲ್ಲಿ ಇಸ್ರೇಲ್ ಮೇಲೆ ಇರಾನ್ ಮಾಡಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಂದು ಮುಂಜಾನೆ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.ಈ ದಾಳಿಯಿಂದಾದ ಸಾವು ನೋವಿನ ಬಗ್ಗೆ ತಕ್ಷಣ ಯಾವ ಮಾಹಿತಿ ಸಿಕ್ಕಿಲ್ಲ. ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಡೆಸಲಾದ ನಿಖರವಾದ ದಾಳಿ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.
ಇರಾನ್ ಆಡಳಿತ ಮತ್ತು ಅದರ ಪ್ರಾಕ್ಸಿಗಳು ಅ.7 ರಿಂದ ಇರಾನ್ ನಿಂದ ನೇರ ದಾಳಿ ಸೇರಿದಂತೆ ಏಳು ಬಗೆಯ ದಾಳಿಗಳನ್ನು ಇಸ್ರೇಲ್ ಮೇಲೆ ಪಟ್ಟುಬಿಡದೆ ನಡೆಸುತ್ತಿವೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೆ ತಿಳಿಸಿದೆ. ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿ, ಸೋಟಗಳ ಸದ್ದು ಕೇಳಿಸುತ್ತಿತ್ತು, ಕೆಲವು ಶಬ್ದಗಳು ನಗರದ ಸುತ್ತಲಿನ ವಾಯು ಸೇನಾ ರಕ್ಷಣಾ ವ್ಯವಸ್ಥೆಗಳಿಂದ ಬಂದವು ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ಹೇಳಿವೆ.
ಕನಿಷ್ಠ ಏಳು ಸೋಟಗಳು ಕೇಳಿಬಂದಿವೆ, ಇದು ಸುತ್ತಮುತ್ತಲಿನ ಪ್ರದೇಶವನ್ನು ದಂಗುಬಡಿಸಿತು ಎಂದು ಟೆಹ್ರಾನ್ ನಿವಾಸಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ಗೆ ಹೇಳಿದ್ದಾರೆ. ಕಳೆದ ವರ್ಷ ಅ.7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯೊಂದಿಗೆ ಪ್ರಾರಂಭವಾದ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್ -ಹಮಾಸ್ ಯುದ್ಧದ ಮಧ್ಯೆ ಇರಾನ್ ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳನ್ನು ಪ್ರಾರಂಭಿಸಿದೆ.
ಜೆರುಸಲೆಮ್ ಪೋಸ್ಟ್ ವರದಿ ಪ್ರಕಾರ, ಇರಾನ್‌ನಲ್ಲಿನ ಮಿಲಿಟರಿ ನೆಲೆಗಳ ಮೇಲೆ ಶನಿವಾರ ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ಇಸ್ರೇಲಿ ವಿಮಾನಗಳನ್ನು ಬಳಸಲಾಗಿತ್ತು. 2000 ಕಿ.ಮೀ ದೂರದಿಂದ ನಡೆಸಿದ ಈ ದಾಳಿಯಲ್ಲಿ ಏಫ್ 35 ಫೈಟರ್ ಜೆಟ್ ಬಳಸಲಾಗಿದೆ. ಅಮೆರಿಕದ ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ಪ್ರತಿಕ್ರಿಯೆ ನೀಡಿದ್ದು, ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸುವ ಮೊದಲು ಅಮೆರಿಕಕ್ಕೆ ಮಾಹಿತಿ ನೀಡಲಾಗಿತ್ತು, ಆದರೆ ಅಮೆರಿಕಾ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.
ಟೈಮ್ಸ್ ಆಫ್ ಇಸ್ರೇಲ್ ವರದಿ ಪ್ರಕಾರ, ಇರಾನಿನ ಪರಮಾಣು ತಾಣಗಳು ಅಥವಾ ತೈಲ ಕ್ಷೇತ್ರಗಳ ಮೇಲೆ ಇಸ್ರೇಲ್ ದಾಳಿ ಮಾಡುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಇಸ್ರೇಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿ ಮಾಡಿದೆ. ಇಸ್ರೇಲ್ ಗಮನವು ಮಿಲಿಟರಿ ನೆಲೆಗಳ ಮೇಲೆ ಕೇಂದ್ರೀಕೃತವಾಗಿದೆ. ಇಸ್ರೇಲ್ ಸೇನೆ ಕೂಡ ಇದನ್ನು ದೃಢಪಡಿಸಿದೆ. ಈ ಹಿಂದೆ ನಮಗೆ ಅಪಾಯ ತಂದಿರುವ ಅಥವಾ ಭವಿಷ್ಯದಲ್ಲಿ ಅಪಾಯ ತಂದೊಡ್ಡಬಹುದಾದ ವಿಷಯಗಳನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ. ನಮ್ಮ ದೇಶವನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ ಎಂದು ಇಸ್ರೇಲ್ ಅಽಕಾರಿ ಹೇಳಿರುವುದಾಗಿ ವರದಿಯಾಗಿದೆ.
ಕೇಂದ್ರ ಟೆಹ್ರಾನ್‌ನಲ್ಲಿ ಶೆಲ್ ದಾಳಿಯ ಸದ್ದು ಕೇಳುತ್ತಿದೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಹೇಳಿದೆ. ಇರಾನ್‌ನ ರೆವೂಲ್ಯೂಷನರಿ ಗಾರ್ಡ್ಸ್ ಪ್ರಧಾನ ಕಚೇರಿಯ ಬಳಿ ಸೋಟಗಳು ನಡೆದಿರುವ ವರದಿಯೂ ಇವೆ. ಇರಾನ್ ಜೊತೆಗೆ ಇರಾಕ್, ಸಿರಿಯಾ ಮತ್ತು ಲೆಬನಾನ್‌ನಲ್ಲಿಯೂ ಸೋಟದ ಸದ್ದು ಕೇಳಿಬಂದಿದೆ. ಮುಂದಿನ ಸೂಚನೆ ಬರುವವರೆಗೂ ಇರಾಕ್ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿರುವ ಬಗ್ಗೆ ತನಗೆ ತಿಳಿದಿದೆ ಮತ್ತು ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ಅಮೆರಿಕ ಹೇಳಿದೆ.
ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಇಸ್ರೇಲ್‌ನ ಪ್ರತೀಕಾರದ ದಾಳಿಯನ್ನು ಸೂಕ್ಷವಾಗಿ ಗಮನಿಸುತ್ತಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಧ್ಯಪ್ರಾಚ್ಯ ಪ್ರವಾಸದ ನಂತರ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಯುಎಸ್‌ಗೆ ಹಿಂತಿರುಗುತ್ತಿದ್ದಂತೆಯೇ ದಾಳಿ ಸಂಭವಿಸಿದೆ, ಅಲ್ಲಿ ಅವರು ಮತ್ತು ಇತರ ಯುಎಸ್ ಅಧಿಕಾರಿಗಳು ಇಸ್ರೇಲ್‌ಗೆ ಪ್ರತಿಕ್ರಿಯೆ ನೀಡುವಂತೆ ಎಚ್ಚರಿಕೆ ನೀಡಿದ್ದರು,
ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಸೀನ್ ಸಾವೆಟ್ ಹೇಳಿಕೆಯಲ್ಲಿ ಇರಾನ್ನಲ್ಲಿನ ಮಿಲಿಟರಿ ಗುರಿಗಳ ವಿರುದ್ಧ ಇಸ್ರೇಲ್ ಉದ್ದೇಶಿತ ದಾಳಿಗಳನ್ನು ನಡೆಸುತ್ತಿದೆ ಅವರ ಕಾರ್ಯಾಚರಣೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ವರದಿಗಾರರನ್ನು ಇಸ್ರೇಲಿ ಸರ್ಕಾರಕ್ಕೆ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. ಅ.1 ರಂದು ಇರಾನ್ನ ಬೃಹತ್ ಕ್ಷಿಪಣಿ ದಾಳಿಯ ನಂತರ ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು.