ಬೆಂಗಳೂರು,ಫೆ.5- ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿ ಕಾರಿಗಳು ದಾಳಿ ನಡೆಸಿದ್ದಾರೆ. ಬಿಲ್ಡರ್ ಗಳು , ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟ್ಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆ ಹಾಗೂ ಆಸ್ತಿ ಸಂಪಾದನೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದೆಹಲಿ, ಚೆನ್ನೈ, ಗೋವಾ,ಕೋಲ್ಕತ್ತಾದಿಂದ ಅಧಿಕಾರಿಗಳು ಬಂದಿದ್ದಾರೆ. ಬೆಳಗ್ಗೆ 5 ಗಂಟೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.
ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಕಂಟ್ರಾಕ್ಟರ್ ರಾಮಕೃಷ್ಣೇಗೌಡ ಮನೆ, ಎಂ ಪ್ರೋ ಪ್ಯಾಲೇಸ್, ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಮೈಸೂರಿನ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದರು.
ರಾಮಕೃಷ್ಣೇಗೌಡ ನಿವಾಸದಲ್ಲಿ ಐಟಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ರಾಮಕೃಷ್ಣೇಗೌಡ ಕಾರನ್ನೂ ಐಟಿ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಕಾರಿನಲ್ಲಿದ್ದ ದಾಖಲೆ ಪತ್ರಗಳನ್ನು ಮನೆಯೊಳಗೆ ಕೊಂಡೊಯ್ದು ಪರಿಶೀಲನೆ ಮಾಡಿದರು.
ಮೈಸೂರಿನ ದೇವೇಗೌಡ ವೃತ್ತದ ಬಳಿ ಇರುವ ಎಂ ಪ್ರೋ ಪ್ಯಾಲೇಸ್ ಬಳಿ ಬರುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡಿರುವ ಐಟಿ ಅಧಿಕಾರಿಗಳು ಸುಮಾರು 3 ಗಂಟೆಗಳಿಂದ ಪರಿಶೀಲನೆ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ, ಮೈಸೂರಿನಲ್ಲಿ ಕಂಟ್ರಾಕ್ಟರ್, ಇಟ್ಟಿಗೆ ಫ್ಯಾಕ್ಟರಿ ವ್ಯವಹಾರ ಮಾಡುತ್ತಿದ್ದ ರಾಮಕೃಷ್ಣ ಎಂಬುವವರ ಮನೆ-ಕಚೇರಿ ಮೇಲೆ ಐಟಿ ದಾಳಿಯಾಗಿದೆ. ರಾಮಕೃಷ್ಣ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದು ಮೂರು ಕಾರಿನಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ದಾಳಿ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಸಹ ಪರಿಶೀಲನೆ ನಡೆಸಲಾಗಿದೆ. ದಾಳಿಯಲ್ಲಿ ಹಿರಿಯ ಅಧಿಕಾರಿಗಳು ನೇತೃತ್ವ ವಹಿಸಿದ್ದು, ಸಂಪೂರ್ಣ ತಲಾಶ್ ಮಾಡಲಾಗಿದೆ.