ಬೆಂಗಳೂರು,ಜ.27- ಜಾರಿ ನಿರ್ದೇಶನಾಲಯ ತಮ ಪತ್ನಿ ಪಾರ್ವತಿಯವ ರಿಗೆ ನೋಟೀಸ್ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಟ ಡಾ.ಶಿವರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ ಪತ್ನಿ ಪಾರ್ವತಿಯವರಿಗೆ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿದೆ ಎಂದು ಪ್ರಶ್ನೆಯೊಂದಕ್ಕೆ ಒಪ್ಪಿಕೊಂಡರು.
ಮುಡಾ ಪ್ರಕರಣದಲ್ಲಿ ಈಗಾಗಲೇ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಸದಸ್ಯರಿಗೂ ಈಗ ಸಮಸ್ಯೆ ಎದುರಾಗಿದೆ. ಒಂದೆಡೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆಧಾರದ ಮೇಲೆ ಜಾರಿ ನಿರ್ದೇಶನಾಲಯ 141 ಕ್ಕೂ ಹೆಚ್ಚು ನಿವೇಶನಗಳನ್ನು ಜಪ್ತಿ ಮಾಡಲು ಮುಂದಾಗಿದೆ.
ಮುಂದುವರೆದ ಪ್ರಕರಣದ ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ನಿವೇಶನ ಪಡೆದಿರುವುದನ್ನು ವಿಚಾರಣೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಪತ್ನಿಗೆ ನೋಟೀಸ್ ನೀಡಲಾಗಿದೆ.
ಪ್ರಕರಣದಲ್ಲಿ ಸಚಿವ ಭೈರತಿ ಸುರೇಶ್ ಅವರಿಗೂ ನೋಟೀಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಒಂದೆಡೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿರುವ ಹಂತದಲ್ಲೇ ಜಾರಿ ನಿರ್ದೇಶನಾಲಯ ಅಖಾಡ ಪ್ರವೇಶಿಸಿ ನೋಟೀಸ್ ಮೇಲೆ ನೋಟೀಸ್ ನೀಡುತ್ತಿರುವುದು ಕಾಂಗ್ರೆಸ್ ಪಾಳಯಕ್ಕೆ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ.