ಬೆಳಗಾವಿ,ಜ.20- ರಾಷ್ಟ್ರ ರಾಜಕಾರಣದಲ್ಲೇ ಬಹುನಿರೀಕ್ಷಿತ ಜೈ ಭಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ ನಾಳೆ ಇಲ್ಲಿ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಸಮಾವೇಶಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಗಳನ್ನು ನಡೆಸಲಾಗಿದೆ. ದೇಶದ ನಾನಾ ಭಾಗಗಳಿಂದ ಆಗಮಿಸುವ ಪ್ರಮುಖ ನಾಯಕರು, ಎಐಸಿಸಿ ಪದಾಧಿಕಾರಿಗಳು ಹಾಗೂ ಪ್ರಮುಖ ನಾಯಕರುಗಳಿಗೆ ಊಟ, ವಸತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ. ಭದ್ರತೆ, ಪಾರ್ಕಿಂಗ್ ಒಳಗೊಂಡಂತೆ ಎಲ್ಲಾ ಏರ್ಪಾಡುಗಳನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖುದ್ದು ನಿಂತು ಪರಿಶೀಲನೆ ನಡೆಸಿದ್ದಾರೆ.
ನಾಳೆ ನಡೆಯುವ ಸಮಾವೇಶದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದಲೂ ಕಾರ್ಯಕರ್ತರ ದಂಡು ಹರಿದುಬರಲಿದೆ. ಕಾರ್ಯಕರ್ತರಿಗಾಗಿ ವಾಹನ ಹಾಗೂ ಇತರ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಹೊಣೆ ಹೊರಿಸಲಾಗಿದೆ.ಈ ಹಿಂದೆ ಡಿ.27 ರಂದು ನಡೆಯಬೇಕಿದ್ದ ಜೈ ಭಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರ ನಿಧನದಿಂದಾಗಿ ಮುಂದೂಡಲಾಗಿತ್ತು.
ಈ ಮೊದಲು ಸಮಾವೇಶಕ್ಕೆ ಭರ್ಜರಿ ತಯಾರಿಗಳಾಗಿದ್ದವು.
ಮಹಾತಗಾಂಧೀಜಿಯವರು ಬೆಳಗಾವಿಯಲ್ಲಿ ನಡೆದ ಎಐಸಿಸಿಯ ಸಮಾವೇಶದ ಅಧ್ಯಕ್ಷತೆ ವಹಿಸಿ 100 ವರ್ಷ ಕಳೆದ ಹಿನ್ನೆಲೆಯಲ್ಲಿ ಎಐಸಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಅದರ ಬೆನ್ನಲ್ಲೇ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಮನಮೋಹನ್‌ಸಿಂಗ್ ನಿಧನದಿಂದ 9 ದಿನಗಳ ಕಾಲ ಶೋಕಾಚರಣೆ ಘೋಷಣೆಯಾಗಿದ್ದರಿಂದ ಸಮಾವೇಶ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿತ್ತು. ಮರುದಿನಾಂಕವನ್ನು ಇದೇ 21 ಕ್ಕೆ ನಿಗದಿ ಮಾಡಲಾಗಿದೆ. ಅದರ ಪ್ರಯುಕ್ತ ನಾಳೆ ಬೃಹತ್ ಸಮಾವೇಶ ನಡೆಯಲಿದೆ.
ಬೆಳಿಗ್ಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಎಐಸಿಸಿಯ ಪ್ರಮುಖ ಪದಾಧಿಕಾರಿಗಳು ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಬಂದಿಳಿಯಲಿದ್ದಾರೆ. ಮೊದಲಿಗೆ ಸುವರ್ಣ ಸೌಧದ ಮುಂದೆ ನಿರ್ಮಿಸಲಾಗಿರುವ ಮಹಾತ ಗಾಂಧೀಜಿಯವರ ಪ್ರತಿಮೆ ಅನಾವರಣಗೊಳ್ಳಲಿದೆ. ಮಧ್ಯಾಹ್ನದ ಬಳಿಕ ಬೃಹತ್ ಕಾಂಗ್ರೆಸ್ ಸಮಾವೇಶ ಆಯೋಜನೆಗೊಂಡಿದೆ.