ಬೆಂಗಳೂರು,ಸೆ.11- ಪರಪ್ಪನ ಅಗ್ರಹಾರ ಕಾರಾಗೃಹದ ಖೈದಿಗಳಿಗೆ ಮಾದಕವಸ್ತು, ತಂಬಾಕು ಸರಬರಾಜು ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಜೈಲು ವಾರ್ಡನ್ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ಈ ಕಾರಾಗೃಹಕ್ಕೆ ಹುಬ್ಬಳ್ಳಿಯಿಂದ ವರ್ಗಾವಣೆಯಾಗಿದ್ದ ಕಲ್ಲಪ್ಪ ಬಂಧಿತ ಜೈಲು ವಾರ್ಡನ್.ಸೆ.7 ರಂದು ಕರ್ತವ್ಯಕ್ಕೆ ಕಲ್ಲಪ್ಪ ಹಾಜರಾದಾಗ ಅಲ್ಲಿನ ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ಮಾಡಿದಾಗ ಅವರ ಜೇಬಿನಲ್ಲಿ ಮಾದಕವಸ್ತುವಾದ 100 ಗ್ರಾಂ ಆ್ಯಶಿಶ್ ಆಯಿಲ್ ಮತ್ತು ಗುಟ್ಕಾವನ್ನು ಸಲ್ಯೂಶನ್ ಟೇಪ್ನಲ್ಲಿ ಸುತ್ತಿಕೊಂಡು ಬಂದಿರುವುದು ಗೊತ್ತಾಗಿದೆ.
ಈ ಬಗ್ಗೆ ಸಿಐಎಸ್ಎಫ್ ಮುಖ್ಯಸ್ಥರು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಲ್ಲಪ್ಪನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.