ಮೈಸೂರು,ಸೆ.24- ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಜನರ ಸುರಕ್ಷತೆಯ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆಯ ಆಸನ ಸಾಮರ್ಥ್ಯವನ್ನು 65 ಸಾವಿರದಿಂದ 40 ಸಾವರಕ್ಕೆ ಇಳಿಸಲು ನಿರ್ಧರಿಸಿದೆ.
ಅ.2 ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಗೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಬಾರಿ ಆಸನಗಳ ಸಾಮರ್ಥ್ಯವನ್ನು ಇಳಕೆ ಮಾಡಿದೆ.
ಕನಿಷ್ಟ 25 ಸಾವಿರ ಆಸನಗಳನ್ನು ಕಡಿಮೆ ಮಾಡಲಾಗುವುದು. ದೊಡ್ಡ ಸಭೆಗಳನ್ನು ನಿರ್ವಹಿಸುವ ಬಗ್ಗೆ ಜಾಗೃತರಾಗಲು ಪಾಸ್‌ಗಳ ಸಂಖ್ಯೆಯನ್ನು ಕೂಡ ಕಡಿಮೆ ಮುದ್ರಿಸಲಾಗಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಅಧಿಕಾರಿಗಳು ಮತ್ತು ದಸರಾ ಸಮಿತಿಯ ಸಭೆ ನಡೆಸಿ ದಸರಾ ಸುರಕ್ಷತಾ ಕ್ರಮ ಹಾಗೂ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಕಳೆದ ವರ್ಷ 60 ಸಾವಿರ ಆಸನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಈ ಬಾರಿ 40 ಸಾವಿರ ಆಸನಗಳನ್ನು ಹಾಕಲು ನಿರ್ಧರಿಸಲಾಗಿದೆ.ಜಂಬೂ ಸವಾರಿಗೆ ಹೆಚ್ಚು ಜನರು ಆಗಮಿಸುತ್ತಾರೆ. ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ವೀಕ್ಷಿಸಲು ದೇಶ-ವಿದೇಶದಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಪ್ರತಿ ವರ್ಷ ಪಾಸ್‌ಗಳ ಅವ್ಯವಸ್ಥೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಪಾಸ್‌ಗಳನ್ನು ಮುದ್ರಿಸಲಾಗುತ್ತದೆ ಎಂಬ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ವರ್ಷ ಉಪಸಮಿತಿಯು ಆಸನ ಲಭ್ಯತೆ ಇರುವಷ್ಟು ಮಾತ್ರ ಪಾಸ್‌ಗಳನ್ನು ಮುದ್ರಿಸಲು ನಿರ್ಧರಿಸಿದೆ.