Monday, May 12, 2025
Homeರಾಷ್ಟ್ರೀಯ | Nationalವಿರಾಮ ಘೋಷಣೆ ಬಳಿಕ ಸಹಜ ಸ್ಥಿತಿಯತ್ತ ಜಮ್ಮು ಮತ್ತು ಕಾಶ್ಮೀರ

ವಿರಾಮ ಘೋಷಣೆ ಬಳಿಕ ಸಹಜ ಸ್ಥಿತಿಯತ್ತ ಜಮ್ಮು ಮತ್ತು ಕಾಶ್ಮೀರ

Jammu and Kashmir returns to normalcy after ceasefire announcement

ಶ್ರೀನಗರ, ಮೇ 11– ಕದನ ವಿರಾಮ ಘೋಷಣೆ ಬಳಿಕವೂ ಪಾಕಿಸ್ತಾನ ಶೆಲ್‌ ದಾಳಿ ನಡೆಸಿದ ಪರಿಣಾಮ ಉದ್ವಿಗ್ನಗೊಂಡಿದ್ದ ಜಮು ನಗರದಲ್ಲಿ ಪರಿಸ್ಥಿತಿ ಸಹಜವಾಗಿದೆ. ತಡರಾತ್ರಿ ಬಳಿಕ ಯಾವುದೇ ಡ್ರೋನ್‌ಗಳು ಅಥವಾ ಗುಂಡಿನ ದಾಳಿ ಮತ್ತು ಶೆಲ್‌ ದಾಳಿ ವರದಿಯಾಗಿಲ್ಲ. ಪೂಂಚ್‌ ಪ್ರದೇಶದಲ್ಲೂ ಪರಿಸ್ಥಿತಿ ಸಹಜವಾಗಿದೆ ಎಂದು ವರದಿಯಾಗಿದೆ.

ರಜೌರಿ, ಪೂಂಚ್‌ ಮತ್ತು ಪಠಾಣ್‌ಕೋಟ್‌ನಲ್ಲೂ ಯಾವುದೇ ಡ್ರೋನ್‌ ದಾಳಿ ನಡೆದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಮು ಮತ್ತು ಕಾಶೀರದ ಶ್ರೀನಗರ, ರಾಜಸ್ಥಾನದ ಬಾರ್ಮರ್‌, ಜೈಸಲೇರ್‌ ಸೇರಿದಂತೆ ಹಲವು ನಗರಗಳಲ್ಲಿ ಸಂಪೂರ್ಣ ಬ್ಲ್ಯಾಕ್‌ಔಟ್‌ ಜಾರಿಗೊಳಿಸಿದ್ದರಿಂದ ಕಗ್ಗತ್ತಲ ವಾತಾವರಣ ಮನೆ ಮಾಡಿತ್ತು. ಸ್ಥಳೀಯರಲ್ಲಿ ಆತಂಕ ಮಡುಗಟ್ಟಿತ್ತು. ಜಮು ಮತ್ತು ಕಾಶೀರದ ರಜೌರಿಯಲ್ಲಿ ಪಾಕ್‌ ಶೆಲ್‌ ದಾಳಿಗೆ ಐಎಎಸ್‌‍ ಅಧಿಕಾರಿ ಮೃತಪಟ್ಟಿದ್ದರು.

ಕದನ ವಿರಾಮ ಜಾರಿಯಲ್ಲಿದೆ ಎಂದು ಉಭಯ ದೇಶಗಳು ಘೋಷಣೆ ಮಾಡಿದ್ದವಾದರೂ, ಕತ್ತಲಾಗುವಷ್ಟರಲ್ಲಿ ಪಾಕ್‌ ಸೇನೆ ಎಂದಿನಂತೆ ಜಮು ಮತ್ತು ಕಾಶೀರ, ಪಂಜಾಬ್‌ ಹಾಗೂ ರಾಜಸ್ಥಾನದ ಗಡಿ ಭಾಗಗಳಲ್ಲಿ ಭಾರಿ ಶೆಲ್‌ ಮತ್ತು ಡ್ರೋನ್‌ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ದಿಟ್ಟ ತಿರುಗೇಟು ನೀಡಲು ಭಾರತ ಸರಕಾರ ಭದ್ರತಾ ಪಡೆಗಳಿಗೆ ಪರಮಾಧಿಕಾರ ನೀಡಿದೆ.

ಪಾಕ್‌ ದಾಳಿಗೆ ಬಿಎಸ್‌‍ಎಫ್‌ ಪ್ರತಿದಾಳಿ ಮೂಲಕ ದಿಟ್ಟ ತಿರುಗೇಟು ನೀಡಿದೆ. ಎಲ್ಲಾ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಶ್ರೀನಗರ, ಬಾರಾಮುಲ್ಲಾ, ಜಮು, ಸೋಪೊರ್‌, ಸೋನಾವರ್‌, ರಾಜಸ್ಥಾನದ ಜೈಸಲೇರ್‌ ಹಾಗೂ ಪಂಜಾಬ್‌‍ನ ಹಲವು ಭಾಗಗಳಲ್ಲಿ ಸ್ಫೋಟದ ಸದ್ದು ಕೇಳಿಸಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಜಮು, ಶ್ರೀನಗರ, ಬಾರಾಮುಲ್ಲಾ, ಉರಿ, ಉಧಾಂಪುರ, ಕುಪ್ವಾರಾ, ಸಾಂಬಾ, ಪೂಂಚ್‌, ರಜೋರಿ, ಫಿರೋಜ್ಪುರ, ಅಖ್ನೂರ್‌ ಸೇರಿದಂತೆ ವಿವಿಧೆಡೆ ಪರಿಸ್ಥಿತಿಯು ಶಾಂತವಾಗಿದೆ. ಈ ಮಧ್ಯೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅಮೃತಸರ ಜಿಲ್ಲಾಧಿಕಾರಿ ರೆಡ್‌ ಅಲರ್ಟ್‌ ಹೊರಡಿಸಿದ್ದು, ನಿವಾಸಿಗಳು ಮನೆಯಿಂದ ಹೊರಬರದಂತೆ, ಕಿಟಕಿಗಳಿಂದ ದೂರವಿರುವಂತೆ ಸೂಚಿಸಿದ್ದರು.

ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಜನರ ಅನುಕೂಲಕ್ಕಾಗಿ ವಿದ್ಯುತ್‌ ಸರಬರಾಜನ್ನು ಮರುಸ್ಥಾಪಿಸಿದ್ದೇವೆ. ಆದರೆ, ರೆಡ್‌ ಅಲರ್ಟ್‌ ವಾಪಸ್‌‍ ಪಡೆದಿಲ್ಲ. ಹಾಗಾಗಿ ಮನೆಯಿಂದ ಯಾರೂ ಹೊರಗೆ ಹೋಗಬೇಡಿ. ಮನೆಯೊಳಗೇ ಇರಿ, ಕಿಟಕಿಗಳಿಂದಲೂ ದೂರವಿರಿ. ನಮಗೆ ಗ್ರೀನ್‌ ಸಿಗ್ನಲ್‌ ಬಂದಾಗ ನಾವು ನಿಮಗೆ ತಿಳಿಸುತ್ತೇವೆ. ಭಯ ಬೇಡ, ಆದರೆ ಎಚ್ಚರದಿಂದಿರಿ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಮುಂಜಾನೆ 4.39ಕ್ಕೆ ನಿವಾಸಿಗಳು ದೀಪಗಳನ್ನು ಆರಿಸಿ ಕಿಟಕಿಗಳು, ರಸ್ತೆ, ಬಾಲ್ಕನಿಗಳು ಅಥವಾ ಟೆರೇಸ್ಗಳ ಬಳಿ ಹೋಗದಂತೆ ಸೂಚಿಸಿದ್ದರು.ಯುದ್ಧ ನಿಲ್ಲಿಸುವಂತೆ ಉಭಯ ದೇಶಗಳ ಡಿಜಿಎಂಒಗಳು ಶನಿವಾರ ಮಾಡಿಕೊಂಡ ಒಪ್ಪಂದದ ಬಳಿಕವೂ ಶನಿವಾರ ರಾತ್ರಿ ಪಾಕಿಸ್ತಾನ ಶೆಲ್‌ ಹಾಗೂ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಸೇನೆ ಪ್ರತಿದಾಳಿ ನಡೆಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ ಹೇಳಿದ್ದರು.

ಅಮೃತಸರದಲ್ಲಿ ಪರಿಸ್ಥಿತಿ ಶಾಂತ: ಅಮೃತಸರದಲ್ಲೂ ಕೂಡ ತಡರಾತ್ರಿ ಬಳಿಕ ಯಾವುದೇ ಡ್ರೋನ್‌ ದಾಳಿ ವರದಿಯಾಗಿಲ್ಲ. ಸುರಕ್ಷತಾ ಕ್ರಮವಾಗಿ ವಿಮಾನ ನಿಲ್ದಾಣದ ಆವರಣದಲ್ಲಿರುವ ಗುರುದ್ವಾರಕ್ಕೆ ಪ್ರವೇಶ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಡ್ರೋನ್‌ ಚಟುವಟಿಕೆ ಕಂಟುಬಂದಿಲ್ಲ. ಸಾರ್ವಜನಿಕರು ತಪ್ಪು ಮಾಹಿತಿಯನ್ನು ನಂಬಬಾರದು ಅಥವಾ ಪ್ರಸಾರ ಮಾಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

ಸಹಜ ಸ್ಥಿತಿಯತ್ತ ಜನಜೀವನ:
ರಾಜಸ್ತಾನದ ಬಾರ್ಮರ್‌ ಜಿಲ್ಲೆಯಲ್ಲೂ ಸಾರ್ವಜನಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಭಾನುವಾರ ಬಾರ್ಮರ್‌ನಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಜಿಲ್ಲಾ ಅಧಿಕಾರಿಗಳ ಮಾಹಿತಿಯಂತೆ, ಅಂಗಡಿಗಳು ಮತ್ತು ಮಾರುಕಟ್ಟೆಗಳು ನಿಯಮಿತ ಸಮಯದಲ್ಲಿ ತೆರೆದಿರಲಿವೆ. ಸಾರ್ವಜನಿಕ ಚಟುವಟಿಕೆಗಳು ಪುನರಾರಂಭಗೊಳ್ಳಲಿದೆ. ನಿನ್ನೆ ತಡರಾತ್ರಿ ಬಳಿಕ ಈ ಪ್ರದೇಶದಲ್ಲಿ ಯಾವುದೇ ಡ್ರೋನ್‌ ಅಥವಾ ಶೆಲ್‌ ದಾಳಿ ವರದಿಯಾಗಿಲ್ಲ.ಶನಿವಾರ ರಾತ್ರಿ ಪಾಕಿಸ್ತಾನವು ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ವಿದ್ಯುತ್‌ ಕಡಿತ ಮಾಡಲಾಗಿತ್ತು.

ವಿಶೇಷ ಸುದ್ದಿಗೋಷ್ಠಿ ಕರೆದು ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ, ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ಶನಿವಾರ ಸಂಜೆ ಆದ ಒಪ್ಪಂದವು ಕಳೆದ ಕೆಲ ಗಂಟೆಗಳಿಂದ ಉಲ್ಲಂಘನೆಯಾಗುತ್ತಿದೆ. ಇದಕ್ಕೆ ಭಾರತೀಯ ಸಶಸ್ತ್ರ ಪಡೆಗಳು ಸಮರ್ಪಕ ಮತ್ತು ಸೂಕ್ತ ಪ್ರತಿಕ್ರಿಯೆ ನೀಡುತ್ತಿವೆ. ಈ ಉಲ್ಲಂಘನೆಗಳನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ ಹೇಳಿದ್ದರು.ಈ ಉಲ್ಲಂಘನೆ ಬಿಟ್ಟು ಪರಿಸ್ಥಿತಿಯನ್ನು ಗಂಭೀರ ಹಾಗೂ ಜವಾಬ್ದಾರಿಯಿಂದ ನಿಭಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭಾರತ ಕರೆ ನೀಡಿದೆ.

ಜಮು ಮತ್ತು ಕಾಶೀರದ ರಾಜಕೀಯ ನಾಯಕರು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಇದು ದೊಡ್ಡ ನೆಮದಿಯೆಂದು ಹೇಳಿದ್ದಾರೆ. ಕೆಲವು ದಿನಗಳಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಸಾವು-ನೋವುಗಳು ಸಂಭವಿಸಿದ್ದರಿಂದ ಕದನ ವಿರಾಮ ಸಮಾಧಾನ ತಂದಿದೆ. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಹುರಿಯತ್‌ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್‌ ಉಮರ್‌ ಫಾರೂಕ್‌ ಮತ್ತು ನ್ಯಾಷನಲ್‌ ಕಾನ್ಫರೆನ್‌್ಸ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಅವರು ಶಾಂತಿಗಾಗಿ ಕರೆ ನೀಡಿದ್ದಾರೆ. ಮಿಲಿಟರಿ ಹೋರಾಟ ಬೇಡ, ರಾಜಕೀಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ.

ಮೆಹಬೂಬಾ ಮುಫ್ತಿ ಅವರು ಭಯೋತ್ಪಾದನೆ ಸರಿ ಅಲ್ಲ. ಆದರೆ, ಅದರಿಂದಾಗಿ ಭಾರತ ಮತ್ತು ಪಾಕಿಸ್ತಾನ ಯುದ್ಧ ಮಾಡುವುದು ಬೇಡ. ಯುದ್ಧದಿಂದ ಪರಿಹಾರ ಸಿಗಲ್ಲ. ರಾಜಕೀಯ ಮಾತುಕತೆಯಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಎಲ್ಲಾ ನಾಯಕರು ಸೇರಿ ಶಾಂತಿಗಾಗಿ ಪ್ರಯತ್ನಿಸಬೇಕು. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ.

RELATED ARTICLES

Latest News