ರಾಂಬನ್,ಏ.21- ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸೋಮವಾರ ಎರಡನೇ ದಿನವೂ ಮುಚ್ಚಲ್ಪಟ್ಟಿದ್ದು, ಸುಮಾರು 20 ಸ್ಥಳಗಳಲ್ಲಿ ನಡೆಯುತ್ತಿರುವ ರಸ್ತೆ ತೆರವು ಕಾರ್ಯಾಚರಣೆ ಸುಮಾರು ಆರು ದಿನಗಳು ತೆಗೆದುಕೊಳ್ಳಬಹುದು ಎಂದು ಎನ್‌ಎಚ್‌ಎಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ನಿನ್ನೆ ಭಾರಿ ಮಳೆ ಮತ್ತು ಮೋಡದ ಸ್ಫೋಟದಿಂದಾಗಿ ಹಠಾತ್ ಪ್ರವಾಹ, ಭೂಕುಸಿತ ಸಂಭವಿಸಿದ ನಂತರ ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾದ 250 ಕಿಲೋಮೀಟರ್ ಉದ್ದದ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿವೆ.
ಹೀಗಾಗಲೆ 100 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ, ನೈಸರ್ಗಿಕ ವಿಕೋಪವು ರಸ್ತೆಗಳು ಮತ್ತು ವಸತಿ ಕಟ್ಟಡಗಳು ಸೇರಿದಂತೆ ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟುಮಾಡಿದೆ. ಹಲವಾರು ವಾಹನಗಳು ಸಹ ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸೆರಿ ಮತ್ತು ಮಾರೂಗ್ ನಡುವಿನ ನಾಲ್ಕು ಕಿಲೋಮೀಟರ್ ವ್ಯಾಪ್ತಿಯ ಹೆದ್ದಾರಿಯಲ್ಲಿ 12ಕ್ಕೂ ಹೆಚ್ಚು ಸ್ಥಳಗಳಲ್ಲಿ, ಬೃಹತ್ ಪ್ರಮಾಣದಲ್ಲಿ ಕೆಸರು ಸಂಗ್ರಹವಾಗಿರುವುದರಿಂದ ನಾವು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಕೆಲವು ಸ್ಥಳಗಳಲ್ಲಿ ಕೆಸರಿನ ಎತ್ತರ 20 ಅಡಿಗಳಿಗಿಂತ ಹೆಚ್ಚು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಯೋಜನಾ ನಿರ್ದೇಶಕ ಪುರುಷೋತ್ತಮ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಣ್ಣು ತೆಗೆಯುವ ಯಂತ್ರೋಪಕರಣಗಳು ಸೇರಿದಂತೆ ಸಂಸ್ಥೆಯ ಪ್ರಮುಖ ಯಂತ್ರೋಪಕರಣಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ ಎಂದು ಅವರು ಹೇಳಿದರು.
ನಮ್ಮ ಸ್ವಂತ ಸಂಪನ್ಮೂಲಗಳು ಸೀಮಿತವಾಗಿ ಲಭ್ಯವಿದ್ದರೂ, ಪುನಃಸ್ಥಾಪನೆ ಕಾರ್ಯವನ್ನು ವೇಗಗೊಳಿಸಲು ನಾವು ಖಾಸಗಿ ಗುತ್ತಿಗೆದಾರರಿಂದ ಯಂತ್ರೋಪಕರಣಗಳ ವ್ಯವಸ್ಥೆ ಮಾಡಿದ್ದೇವೆ ಮತ್ತು 20 ಪೀಡಿತ ಸ್ಥಳಗಳಲ್ಲಿ ಅವುಗಳನ್ನು ಏಕಕಾಲದಲ್ಲಿ ನಿಯೋಜಿಸಿದ್ದೇವೆ ಎಂದು ಅವರು ಹೇಳಿದರು.
ಎರಡು ದಿನಗಳ ಭಾರೀ ಮಳೆಯ ನಂತರ ಹವಾಮಾನ ಪರಿಸ್ಥಿತಿ ಸುಧಾರಿಸಿದೆ ಆದಾಗ್ಯೂ, ಹೆದ್ದಾರಿ ಸಂಚಾರಕ್ಕೆ ಮತ್ತೆ ಐದರಿಂದ ಆರು ದಿನಗಳು ಬೇಕಾಗುವ ಸಾಧ್ಯತೆಯಿದೆ ಎಂದು ಕುಮಾರ್ ಹೇಳಿದರು.