ಹಾಸನ,ಏ.9- ಬೆಲೆ ಏರಿಕೆಯ ಕಾರಣ ಜನರ ಸಹನೆಯ ಕಟ್ಟೆ ಒಡೆಯುವ ಪರಿಸ್ಥಿತಿ ಬಂದಿದೆ. ಜನಾಕ್ರೋಶ ಯಾತ್ರೆ ಎಲ್ಲ ಕಡೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ಜನರು ಪರದಾಡುವ ಪರಿಸ್ಥಿತಿಯನ್ನು ಸಿದ್ದರಾಮಯ್ಯನವರ ಸರಕಾರ ನಿರ್ಮಿಸಿದ್ದು, ಇದು ದುರದೃಷ್ಟಕರ ಎಂದು ಟೀಕಿಸಿದರು.ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿಷಯದಲ್ಲಿ ಕರ್ನಾಟಕವೇ ನಂಬರ್ ಒನ್ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ ಎಂದು ಗಮನಸೆಳೆದರು.
ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ನಮ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ ಇದೀಗ ರಾಜ್ಯವು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದು ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ತಿಳಿಸಿದ್ದಾಗಿ ವಿವರಿಸಿದರು.
ಇದರ ಜೊತೆಗೆ ಮುಸಲಾನರ ಓಲೈಕೆ ರಾಜಕಾರಣ, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ರೂ. ಹಣದ ದುರುಪಯೋಗವನ್ನೂ ತಿಳಿಸಲು ನಮ ಯಾತ್ರೆ ಇಂದು ಮಡಿಕೇರಿ, ಮಂಗಳೂರಿಗೆ ತೆರಳಲಿದೆ ಎಂದು ತಿಳಿಸಿದರು.
ನನ್ನದು ಏಕಾಂಗಿ ಹೋರಾಟವಲ್ಲ; ಪಕ್ಷದ ವಿಪಕ್ಷ ನಾಯಕರು, ಹಿರಿಯರು ಒಟ್ಟಾಗಿ ಈ ಯಾತ್ರೆ ತೆರಳುತ್ತಿದ್ದೇವೆ. ಸಿದ್ದರಾಮಯ್ಯನವರ ಸರಕಾರ 50 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಎಳೆಯುವ ಕೆಲಸ ಮಾಡಿದೆ. ವಿಪಕ್ಷವಾಗಿ ತಕ್ಷಣ ಸ್ಪಂದಿಸುವುದು ನಮ ಆದ್ಯ ಕರ್ತವ್ಯ ಎಂದು ಅವರು ಪ್ರಶ್ನೆಗೆ ಉತ್ತರಕೊಟ್ಟರು