ನವದೆಹಲಿ, ಸೆ.30– ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಮಾಜಿ ಸಚಿವ, ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ತವರು ಜಿಲ್ಲೆ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆರವು ಮಾಡಿದೆ.ಈವರೆಗೂ ಬಳ್ಳಾರಿಗೆ ತೆರಳಲು ಜನಾರ್ಧನ ರೆಡ್ಡಿ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯಬೇಕಿತ್ತು. ಇದನ್ನು ಪ್ರಶ್ನಿಸಿ ಅವರ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಮೇಲನವಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ನೇತೃತ್ವದ ದ್ವಿಸದಸ್ಯ ಪೀಠ, ಬಳ್ಳಾರಿ , ಕಡಪ ಮತ್ತು ಅನಂತಪುರ ಜಿಲ್ಲೆಗಳಿಗೆ ತೆರಳಲು ಹಾಕಿದ್ದ ನಿರ್ಬಂಧವನ್ನು ತೆರವು ಮಾಡಿತು.
ಈ ಹಿಂದೆ ರೆಡ್ಡಿ ತಮ ಪುತ್ರಿಯ ವಿವಾಹ ಹಾಗೂ ಹೆರಿಗೆ ಸಂದರ್ಭದಲ್ಲಿ ಮಾತ್ರ ಬಳ್ಳಾರಿ ಪ್ರವೇಶಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು. ಅವರು ಜಿಲ್ಲೆಗೆ ಬಂದರೆ ಅಕ್ರಮ ಗಣಿಕಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಪ್ರಭಾವ ಬೀರಬಹುದೆಂಬ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಗೆ ಕಾಲಿಡದಂತೆ ನಿರ್ಬಂಧ ಹಾಕಲಾಗಿತ್ತು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲುಪಾಲಾಗಿದ್ದರು. ನಂತರ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 2015ರ ಜನವರಿ 23ರಂದು ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು.
ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 5, 2011ರಲ್ಲಿ ಜನಾರ್ದನ ರೆಡ್ಡಿ ಹಾಗೂ ಒಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಸಂಬಂಧಿ ಬಿ.ವಿ.ಶ್ರೀನಿವಾಸ್ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು. ಬಳಿಕ ಅವರನ್ನು ಆಂಧ್ರಪ್ರದೇಶದ ಪೆನುಗೊಂಡ ಜೈಲಿನಲ್ಲಿ ಇಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ರೆಡ್ಡಿ ಆಂಧ್ರಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಬೇಲೆಕೇರಿ ಅದಿರು ನಾಪತ್ತೆ ಸೇರಿದಂತೆ ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ವಿರುದ್ಧ ಒಟ್ಟು ಏಳು ಪ್ರಕರಣಗಳು ದಾಖಲಾಗಿದ್ದವು. ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಪಡೆದಿದ್ದ ರೆಡ್ಡಿ, ಒಬಳಾಪುರಂ ಮೈನಿಂಗ್ ಪ್ರಕರಣದಲ್ಲಿ ಮಾತ್ರ ಜಾಮೀನು ಸಿಗಬೇಕಿತ್ತು. ಈಗ ಅದೂ ಸಿಕ್ಕಿದ್ದು, ರೆಡ್ಡಿ ಜೈಲಿನಿಂದ ಹೊರ ಬಂದಿದ್ದರು.
ಕಳೆದ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಱಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪಕ್ಷದ ಇತರ ಅಭ್ಯರ್ಥಿಗಳು ಯಾರೂ ಗೆಲುವು ಸಾಧಿಸಿರಲಿಲ್ಲ.2024 ರ ಲೋಕಸಭೆ ಚುನಾವಣೆಗೂ ಮುನ್ನ ಮಾರ್ಚ್ 25ರಂದು ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಷರತ್ತುರಹಿತವಾಗಿ ಬಿಜೆಪಿ ಜತೆ ವಿಲೀನಗೊಳಿಸಿದ್ದರು.