ಬೆಂಗಳೂರು,ಫೆ.26- ರಾಜ್ಯಸಭೆ ಚುನಾವಣೆಯ ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕೆಕೆಪಿಪಿ ರಾಜ್ಯಾಧ್ಯಕ್ಷ ಹಾಗೂ ಹಾಲಿ ಶಾಸಕ ಜನಾರ್ಧನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿರುವ ಜನಾರ್ಧನ ರೆಡ್ಡಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.
ಐತಿಹಾಸಿಕ ಆನೆಗುಂದಿ ಉತ್ಸವಕ್ಕೆ ಆಗಮಿಸಲು ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿದ್ದಾಗಿ ರೆಡ್ಡಿ ಹೇಳಿದ್ದರಾದರೂ ಭೇಟಿಯ ಹಿಂದೆ ರಾಜಕೀಯ ಉದ್ದೇಶ ಇರುವುದನ್ನು ಅಲ್ಲಗೆಳೆಯುವಂತಿಲ್ಲ.
ನಾಳೆ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕಾದ ಸಂಗ್ದತೆಯಲ್ಲಿರುವ ಕಾಂಗ್ರೆಸ್‍ಗೆ ಒಂದೊಂದು ಮತವು ಕೂಡ ಅಭ್ಯರ್ಥಿಗಳ ಸೋಲುಗೆಲುವಿನ ಹಣೆಬರಹವನ್ನು ತೀರ್ಮಾನಿಸುತ್ತದೆ.
ಸುರಪುರ ಶಾಸಕ ರಾಜ ವೆಂಕಟಪ್ಪ ನಾಯಕ್ ಹಠಾತ್ ನಿಧನದಿಂದ ಒಂದು ಮತದ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಇದೀಗ ಜನಾರ್ಧನ ರೆಡ್ಡಿಯನ್ನೇ ಆಪರೇಷನ್ ಹಸ್ತ ನಡೆಸಿರಬಹುದು ಎನ್ನಲಾಗುತ್ತಿದೆ.
ಬಿಜೆಪಿಯಿಂದ ತುಸು ಅಂತರ ಕಾಯ್ದುಕೊಂಡಿರುವ ರೆಡ್ಡಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ಹಾಕಬಹುದೆಂದು ಹೇಳಲಾಗುತ್ತಿದೆ.
ರಷ್ಯಾ ಸೇನೆಯಿಂದ ಭಾರತೀಯರ ಬಿಡುಗಡೆ
5ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್ ಬೆಂಬಲಿತ ಕುಪೇಂದ್ರ ರೆಡ್ಡಿಯನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದ್ದು, ನಾಲ್ವರು ಪಕ್ಷೇತರ ಶಾಸಕರಿಗೆ ಗಾಳ ಹಾಕಿದೆ. ಈಗಾಗಲೇ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಪುಟ್ಟಸ್ವಾಮಿ ಗೌಡ, ಲತಾ ಮಲ್ಲಿಕಾರ್ಜುನ್ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದ್ದು, ಈಗ ರೆಡ್ಡಿ ಕೂಡ ಕೈಗೆ ಜೈ ಎನ್ನುವ ಸಾಧ್ಯತೆ ಇದೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ರೆಡ್ಡಿ, ಇದೊಂದು ಸೌಹಾರ್ದಯುತ ಭೇಟಿ. ಆನೆಗುಂದಿಯಲ್ಲಿ ನಡೆಯುವ ಉತ್ಸವಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದೇವೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡಿದ್ದಾರೆ. ನಾನು ಇನ್ನು ಇದರ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.