ಬೆಂಗಳೂರು,ಜ.24-ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ನಡುವೆ ಉಂಟಾಗಿರುವ ಹಾದಿಬೀದಿ ರಂಪಾಟಕ್ಕೆ ಪೂರ್ಣ ವಿರಾಮ ಹಾಕಲು ಕೇಂದ್ರ ಬಿಜೆಪಿ ವರಿಷ್ಠರು ಮುಂದಾಗಿದ್ದು, ಇಬ್ಬರ ನಡುವೆ ಸಂಧಾನ ನಡೆಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ಜವಾಬ್ದಾರಿ ನೀಡಲಾಗಿದೆ.
ರೆಡ್ಡಿ ಮತ್ತು ರಾಮುಲು ನಡುವೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಆರೋಪ-ಪ್ರತ್ಯಾರೋಪ ಮಾಡದಂತೆ ತಡೆದು ಮಾತುಕತೆಗೆ ದೆಹಲಿಗೆ ಕರೆತರುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೋಷಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಇಬ್ಬರ ನಡುವೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಜೋಷಿ ಬರುವ ದಿನಗಳಲ್ಲಿ ಮಾಧ್ಯಮಗಳ ಮುಂದೆ ಹೋಗದಂತೆ ರೆಡ್ಡಿ ಹಾಗೂ ರಾಮುಲುಗೆ ತಾಕೀತು ಮಾಡಿದ್ದಾರೆ.
ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಅಪ್ಪಿತಪ್ಪಿಯೂ ಆರೋಪ-ಪ್ರತ್ಯಾರೋಪ, ಟೀಕೆ-ಟಿಪ್ಪಣಿ ಮಾಡಬಾರದು. ಇದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಜೆ.ಪಿ.ನಡ್ಡಾ ಅವರ ಲಭ್ಯತೆ ನೋಡಿಕೊಂಡು ಸಮಯ ನಿಗದಿಪಡಿಸಲಾಗುತ್ತದೆ. ಅಲ್ಲಿಯ ತನಕ ಮಾತನಾಡಬಾರದೆಂದು ಜೋಷಿ ಹೇಳಿದ್ದಾಗಿ ತಿಳಿದುಬಂದಿದೆ.
ಬುಧವಾರ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ರೆಡ್ಡಿ ಮತ್ತು ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಜೆ.ಪಿ.ನಡ್ಡಾ ದೂರವಾಣಿ ಕರೆ ಮಾಡಿ ಇದು ಬೇಡವಾಗಿತ್ತು. ನಿಮಗೆ ಉಸ್ತುವಾರಿಗಳ ಬಗ್ಗೆ, ರಾಜ್ಯಾಧ್ಯಕ್ಷರ ಬಗ್ಗೆ ಏನೇ ತಕರಾರು ಇದ್ದರೂ ನನ್ನ ಬಳಿ ಬಂದು ನೇರವಾಗಿ ಚರ್ಚೆ ಮಾಡಬಹುದಿತ್ತು. ಮಾಧ್ಯಮಗಳ ಮುಂದೆ ಹೋಗುವ ಅಗತ್ಯವಾದರೂ ಏನಿತ್ತು ಎಂದು ನಡ್ಡಾ ಪ್ರಶ್ನೆ ಮಾಡಿದ್ದಾರೆ.
ಇಬ್ಬರು ಮೊದಲು ದೆಹಲಿಗೆ ಬನ್ನಿ. ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸೋಣ. ಹಾದಿಬೀದಿಯಲ್ಲಿ ಮಾತನಾಡುವುದರಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಈಗಾಗಲೇ ಒಂದು ಬಣದವರು ನಡೆದುಕೊಳ್ಳುತ್ತಿರುವ ರೀತಿಯಿಂದಲೇ ಕಾರ್ಯಕರ್ತರಿಗೆ ಅತೀವ ನೋವು ಉಂಟಾಗಿದೆ. ನೀವೂ ಅವರ ಹಾದಿ ತುಳಿಯಬೇಡಿ. ಮೊದಲು ದೆಹಲಿಗೆ ಬನ್ನಿ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.
ನಡ್ಡಾ ಅವರ ಸೂಚನೆ ಮೇರೆಗೆ ರೆಡ್ಡಿ ಮತ್ತು ಶ್ರೀರಾಮುಲು ಮುಂದಿನ ವಾರ ದೆಹಲಿಗೆ ತೆರಳುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಿದ್ದಾರೆ.
ರಾಜ್ಯ ಘಟಕದ ನಾಯಕರಿಂದ ಶ್ರೀರಾಮುಲು ಬಹುದೂರ ಸಾಗಿದ್ದು, ಸಂಘಟನಾ ಕಾರ್ಯದರ್ಶಿಯೊಬ್ಬರ ಭರವಸೆಯಿಂದಾಗಿ ಸದ್ಯಕ್ಕೆ ಬಿಜೆಪಿಯಲ್ಲೇ ಉಳಿದಿದ್ದಾರೆ.
ಇಲ್ಲದಿದ್ದರೆ ಈ ವೇಳೆಗಾಗಲೇ ಅವರು ಕಮಲಕ್ಕೆ ಗುಡ್ ಬೈ ಹೇಳಿ, ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿತ್ತು. ನಿಮನ್ನು ಪಕ್ಷವು ಕೈ ಬಿಡುವುದಿಲ್ಲ. ಸಮಸ್ಯೆಗಳಿದ್ದರೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚಿಸಿ ಹೀಗೆ ಬೀದಿಯಲ್ಲಿ ಕಿತ್ತಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿಮ ಘನತೆಯನ್ನು ನೀವೇ ಕುಗ್ಗಿಸಿಕೊಳ್ಳಬೇಡಿ ಎಂದು ರಾಷ್ಟ್ರೀಯ ನಾಯಕರೊಬ್ಬರು ರೆಡ್ಡಿ ಮತ್ತು ಶ್ರೀರಾಮುಲುಗೆ ಹಿತೋಪದೇಶ ಮಾಡಿದ್ದಾರೆ.
ಮೂಲಗಳ ಪ್ರಕಾರ ಮುಂದಿನ ಸೋಮವಾರದ ನಂತರ ಶ್ರೀರಾಮುಲು ದೆಹಲಿಗೆ ತೆರಳಲಿದ್ದು, ನಂತರವೇ ರೆಡ್ಡಿ ಕೂಡ ರಾಷ್ಟ್ರೀಯ ಅಧ್ಯಕ್ಷರ ಬಳಿ ಚರ್ಚೆಗೆ ದೌಡಾಯಿಸುವರು. ಶ್ರೀರಾಮುಲುಗೆ ಪಕ್ಷ ಬಿಡದಂತೆ ಮನವೊಲಿಸಬೇಕೆಂದು ರಾಜ್ಯಾಧ್ಯಕ್ಷ ವಿಜಯೇಂದ್ರ, ಅಶೋಕ್, ಮಾಜಿ ಸಿಎಂ ಬಸವರಾಜ ಬೊಮಾಯಿ ಸೇರಿದಂತೆ ಹಲವಾರು ಹಿರಿಯ ನಾಯಕರು ದೂರವಾಣಿ ಮೂಲಕ ಮಾತುಕತೆ ನಡೆಸಿ ಮನವೊಲಿಸುವ ಕಸರತ್ತು ನಡೆಸಿದ್ದಾರೆ.
ಯಾವಾಗ ಬಿಜೆಪಿ ತಮನ್ನು ಕೈಬಿಡುವುದಿಲ್ಲ ಎಂಬುದು ಅರಿವಾಯಿತೋ ಶ್ರೀರಾಮುಲು ಕೂಡ ಪಕ್ಷ ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಆಪ್ತ ಮೂಲಗಳು ಖಚಿತಪಡಿಸಿವೆ.
ಇದೀಗ ದೆಹಲಿಯಲ್ಲಿ ರೆಡ್ಡಿ ಮತ್ತು ರಾಮುಲು ಮಧ್ಯೆ ಸಂಧಾನ ನಡೆಯಲಿದ್ದು, ಒಂದು ಕಾಲದಲ್ಲಿ ರಾಮಲಕ್ಷ್ಮಣರಂತಿದ್ದ ಇಬ್ಬರು ಈಗ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದು, ಮತ್ತೆ ಕೈ ಕುಲುಕುವರೇ ಎಂಬ ಯಕ್ಷ ಪ್ರಶ್ನೆ ಎಲ್ಲರಿಗೂ ಎದುರಾಗಿದೆ.