ನವದೆಹಲಿ,ಫೆ.9- ಇಂಡಿಯಾ ಮೈತ್ರಿಕೂಟಕ್ಕೆ ಮತ್ತಷ್ಟು ಹೊಡೆತ ಬಿದ್ದಿದ್ದು, ಉತ್ತರಪ್ರದೇಶದ ಜಾಟ್ ಸಮುದಾಯದ ಪ್ರಭಾವಿ ನಾಯಕ ಹಾಗೂ ಆರ್‍ಎಲ್‍ಡಿ ಪಕ್ಷದ ಮುಖ್ಯಸ್ಥ ಜಯಂತ್ ಚೌಧರಿ ಬಿಜೆಪಿ ನೇತೃತ್ವದ ಎನ್‍ಡಿಎಗೆ ವಾಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆರ್‍ಎಲ್‍ಡಿ ಪಕ್ಷಕ್ಕೆ ಉತ್ತರಪ್ರದೇಶದಲ್ಲಿ ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ರಾಜ್ಯಸಭಾ ಸ್ಥಾನವನ್ನು ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದೆ.
ಲೋಕಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ನಡೆದಿರುವ ಈ ಬೆಳವಣಿಗೆ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಎನ್ನಲಾಗಿದೆ. ಉತ್ತರಪ್ರದೇಶದಲ್ಲಿ ಜಾಟ್ ಸಮುದಾಯ ಅತ್ಯಂತ ಬಲಿಷ್ಠವಾಗಿದ್ದು, ಆರ್‍ಎಲ್‍ಡಿ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದರು. ಇದೀಗ ಬಿಜೆಪಿ ನೇತೃತ್ವದ ಎನ್‍ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಇನ್ನಷ್ಟು ಬಲ ಬಂದಂತಾಗಿದೆ.
ಲಾಲೂ ಪತ್ನಿ, ಪುತ್ರಿಯರಿಗೆ ಮಧ್ಯಂತರ ಜಾಮೀನು ಮಂಜೂರು
ಈ ಮೊದಲು ಜಯಂತ್ ಚೌಧರಿ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಕಾರಾತ್ಮಕವಾದ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಅಂತಿಮವಾಗಿ ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ರಾಜ್ಯಸಭಾ ಸ್ಥಾನವನ್ನು ನೀಡಲು ಒಪ್ಪಿಗೆ ದೊರೆತ ನಂತರ ಆರ್‍ಎಲ್‍ಡಿ ಇಂಡಿಯಾ ಮೈತ್ರಿಕೂಟಕ್ಕೆ ಕೈ ಕೊಟ್ಟು ಎನ್‍ಡಿಎನತ್ತವಾಲಿದೆ.
ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕಾಂಗ್ರೆಸ್ ಹಾಗೂ ಆರ್‍ಎಲ್‍ಡಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಇದೀಗ ಆರ್‍ಎಲ್‍ಡಿ ಎನ್‍ಡಿಎ ಜೊತೆ ಹೋಗಿದೆ. ಇದರ ಬೆನ್ನಲ್ಲೇ ಎಸ್‍ಪಿ ಈಗಾಗಲೇ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್ ಜೊತೆ ಸೀಟು ಹೊಂದಾಣಿಕೆ ಕುರಿತು ಇನ್ನು ಗೊಂದಲದಲ್ಲೇ ಇದೆ.