ಮೈಸೂರು, ಜ.22- ಕುರುಚಲು (ಮುಳ್ಳುಗಿಡ)ಗಳ ನಿರ್ಮೂಲನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೆಂಕಿಗೆ ಜೆಸಿಬಿ ಯಂತ್ರವೊಂದು ಸುಟ್ಟು ಕರಕಲಾಗಿರುವ ಘಟನೆ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದ ಜೈನ್ ಗೇಟ್ ಬಳಿ ನಡೆದಿದೆ.
ಅರಣ್ಯ ಪ್ರದೇಶದಲ್ಲಿ ಆನೆಗಳ ನಿಗ್ರಹ ಕಾಯ್ದೆ, ಆನೆ ಕಂದಕ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಅನಾರೋಗ್ಯದ ನಿಮಿತ್ತ ಜೆಸಿಬಿ ಚಾಲಕ ಜೆಸಿಬಿಯನ್ನು ಅಲ್ಲೇ ಬಿಟ್ಟು ಆಸ್ಪತ್ರೆಗೆ ತೆರಳಿದ್ದ ಎಂದು ಹೇಳಲಾಗಿದೆ.
ಈ ವೇಳೆ ಕುರುಚಲು ಸಸ್ಯಗಳ ನಿರ್ಮೂಲನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಬೆಂಕಿಯ ಜ್ವಾಲೆ ಹೆಚ್ಚಾಗಿ ಸಮೀಪದಲ್ಲೇ ಇದ್ದ ಜೆಸಿಬಿ ಯಂತ್ರಕ್ಕೆ ಸ್ಪರ್ಶಿಸಿ ನೋಡನೋಡುತ್ತಿದ್ದಂತೆ ಯಂತ್ರ ಸುಟ್ಟು ಕರಕಲಾಗಿದೆ.
ಅರಣ್ಯ ಪ್ರದೇಶಕ್ಕೆ ನಿರ್ಬಂಧ ಹೇರಿರುವ ಕಾರಣ ಸ್ಥಳಕ್ಕೆ ತುರ್ತು ಅಗ್ನಿಶಾಮಕ ವಾಹನ ಸಹ ತಲುಪಲು ಸಾಧ್ಯವಾಗಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳ ಯಡವಟ್ಟಿನಿಂದ ಜೆಸಿಬಿ ಯಂತ್ರ ಸುಟ್ಟು ಕರಕಲಾಗಿದೆ.