Thursday, December 5, 2024
Homeರಾಜಕೀಯ | Politicsಡಿಸಿಎಂ ಡಿಕೆಶಿ ವಿರುದ್ಧ ಜೆಡಿಎಸ್ ಆಕ್ರೋಶ

ಡಿಸಿಎಂ ಡಿಕೆಶಿ ವಿರುದ್ಧ ಜೆಡಿಎಸ್ ಆಕ್ರೋಶ

JDS anger against DCM DK Shivkumar

ಬೆಂಗಳೂರು,ಡಿ.2- ಅಧಿಕಾರಕ್ಕಾಗಿ ಒಕ್ಕಲಿಗ ಸಮುದಾಯದಿಂದ ಪೆನ್ನು ಪೇಪರ್ ಭಿಕ್ಷೆ ಬೇಡಿದ ನಿಮಗೆ ಈಗ ಸಮುದಾಯ ಕಾಲಕಸವಾಗಿದೆ. ಇದಕ್ಕೆ ನೀವು ಬೆಲೆ ತೆರುತ್ತೀರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ Xನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಡಿ.ಕೆ.ಶಿವಕುಮಾರ್ ಅವರನ್ನು ಸುಳ್ಳಿನ ಶೂರ ಎಂದು ಲೇವಡಿ ಮಾಡಿದೆ.

ಒಕ್ಕಲಿಗರ ಅಸಿತೆಯನ್ನು ಕೆಣಕಿದ್ದೀರಿ. ನಿಮ ಸರ್ಕಾರ ನಿಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಿಗೆ ಬುದ್ಧಿ ಹೇಳುವ ಕನಿಷ್ಠ ಧೈರ್ಯವನ್ನಾದರೂ ಮಾಡಿ ಎಂದು ಸಲಹೆ ಮಾಡಿದೆ.
ಒಕ್ಕಲಿಗ ಸಮುದಾಯ ಮತ್ತು ಪೂಜ್ಯ ಸ್ವಾಮೀಜಿ ಅವರಿಗೆ ನಿಮ ಸರ್ಕಾರ ಮಾಡಿಬಿಟ್ಟ ಅಪಚಾರ ಮುಚ್ಚಿಟ್ಟುಕೊಳ್ಳಲು ಇನ್ನೊಬ್ಬರ ಮೇಲೆ ಕೆಸರೆರೆಚುತ್ತಿದ್ದೀರಿ, ಯಾಕೆ? ಎಂದು ಪ್ರಶ್ನಿಸಿದೆ.

ವಿಶ್ವ ಒಕ್ಕಲಿಗರ ಮಹಸಂಸ್ಥಾನ ಮಠದ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಮೇಲೆ ನೀವು ಎಫ್ಐಆರ್ ಹಾಕಿದ್ದು ಈಗ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ. ಒಕ್ಕಲಿಗರ ಆಕ್ರೋಶಕ್ಕೆ ನೀವು ಗುರಿಯಾಗಿದ್ದೀರಿ. ಬೀಸುವ ದೊಣ್ಣೆಯಿಂದ ಪಾರಾಗಲು ಜೆಡಿಎಸ್ ಬಗ್ಗೆ ಹೊಸ ಹುಳುಕು ಹುಡುಕುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದೆ.

ಜೆಡಿಎಸ್ ಸರಕಾರವಿದ್ದಾಗ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಕೇಸು ಹಾಕಲಾಗಿತ್ತು ಎಂದು ಬಾಲಬುದ್ಧಿಯ ನೀವು ಬಡಬಡಿಸಿದ್ದೀರಿ. ಹಳೆಯ ವಿಷಯ ಕೆದಕಿದ ನಿಮಗೆ ಆ ಪ್ರಕರಣ ಏನು? ಅದು ಮುಂದೇನಾಯಿತು? ಎನ್ನುವ ಮಾಹಿತಿ ಇಲ್ಲವೇ? ಆ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಸಂಬಂಧ ಏನು? ಮುಂದೆ ಆ ಪ್ರಕರಣ ರದ್ದಾಯಿತು, ನಿಮಗೆ ಗೊತ್ತಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದೆ.

ಸ್ವಾಮೀಜಿ ಅವರ ವಿರುದ್ಧ ನಿಮ ಇಡೀ ಕಾಂಗ್ರೆಸ್ ಸರ್ಕಾರ ತೊಡೆತಟ್ಟಿ ನಿಂತಿದೆ. ಸಚಿವರುಗಳೆಲ್ಲ ಅವರ ಮೇಲೆ ರಕ್ಕಸರಂತೆ ಮುಗಿಬಿದ್ದಿದ್ದಾರೆ. ಹೇಳಿಕೆಯ ಬಗ್ಗೆ ಶ್ರೀಗಳು ವಿಷಾದ ವ್ಯಕ್ತಪಡಿಸಿದ ನಂತರವೂ ಅವರ ಮೇಲೆ ಸರ್ಕಾರ ಯಾರದೋ ನಿರ್ದಿಷ್ಟ ಚಿತಾವಣೆಗೆ ಒಳಗಾಗಿ ಕಾಲು ಕೆರೆದು ಜಗಳಕ್ಕೆ ನಿಂತಿದೆ. ಒಕ್ಕಲಿಗ ಸಮುದಾಯದ ಬಗ್ಗೆ ಅಪಮಾನಕರವಾಗಿ ವರ್ತಿಸುತ್ತಿದೆ.

ಓಲೈಕೆ ರಾಜಕೀಯ, ತುಷ್ಟೀಕರಣದ ಪರಾಕಾಷ್ಠೆ ಇದು. ಒಕ್ಕಲಿಗರಿಗೆ ಇದೆಲ್ಲಾ ಅರ್ಥವಾಗುತ್ತಿದೆ ಎಂದಿರುವ ಜೆಡಿಎಸ್, ಒಕ್ಕಲಿಗ ವಿರೋಧಿ ಡಿಕೆಶಿಯವರೇ ನಿಮಗಿದು ತರವೇ? ಎಂದು ಪ್ರಶ್ನಿಸಿದೆ. ಅಲ್ಲದೆ ಒಕ್ಕಲಿಗ ದ್ರೋಹಿ ಕಾಂಗ್ರೆಸ್, ಒಕ್ಕಲಿಗ ದ್ರೋಹಿ ಡಿಕೆಶಿ ಎಂದು ಹ್ಯಾಶ್ ಟ್ಯಾಗ್ ಮಾಡಿ ಆರೋಪಿಸಿದೆ.

RELATED ARTICLES

Latest News