ಬೆಂಗಳೂರು, ಜ.27- ಮೇಕೆದಾಟು ಯೋಜನೆಗೆ ಸದಾ ಅಡ್ಡಗಾಲು ಹಾಕುತ್ತಿರುವ ಇಂಡಿ ಮೈತ್ರಿಕೂಟದ ಮಿತ್ರಪಕ್ಷ ಡಿಎಂಕೆ ಸರ್ಕಾರವನ್ನು ಮೊದಲು ಒಪ್ಪಿಸುವ ತಾಕತ್ತು, ಎದೆಗಾರಿಕೆ ನಿಮಲ್ಲಿ ಇದೆಯೇ ತೋರಿಸಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜೆಡಿಎಸ್ ಆಗ್ರಹಿಸಿದೆ.
ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ನಮ ನೀರು, ನಮ ಹಕ್ಕು – ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ ಎಂದು ಢೋಂಗಿ ಪಾದಯಾತ್ರೆ ಮೂಲಕ ರಾಜ್ಯದ ಜನರ ಕಿವಿಗೆ ಹೂ ಮುಡಿಸಿದ್ದು ಕಾಂಗ್ರೆಸ್ ಪಕ್ಷ ಅಲ್ಲವೇ? ಎಂದು ಪ್ರಶ್ನಿಸಿದೆ.
ತಮಿಳುನಾಡಿನ ಡಿಎಂಕೆ ಸರ್ಕಾರ ಮೇಕೆದಾಟು ಅಣೆಕಟ್ಟು ಕಟ್ಟಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎನ್ನುತ್ತಿದೆ. ಆದರೆ, ಈಗ ಮೇಕೆದಾಟಿಗೆ ಕೇಂದ್ರ ಸರ್ಕಾರದಿಂದ ಸಹಿ ಹಾಕಿಸಿಕೊಡುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಕೇಳುತ್ತಿರುವುದು ಯಾವ ನ್ಯಾಯ? ಎಂದು ಕೇಳಿದೆ.
ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಕ್ಷುಲ್ಲಕ ಹಾಗೂ ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಹೆಚ್ಎಂಟಿ ಮತ್ತು ಕೆಐಒಸಿಎಲ್ ಸಂಸ್ಥೆ ಪುನಶ್ಚೇತನಕ್ಕೆ ಸಹಕಾರ ನೀಡದೆ ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುತ್ತಿದೆ. ರಾಜ್ಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ಉಳಿಸಲು ಶ್ರಮಿಸುತ್ತಿರುವ ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ, ಅಸಹಕಾರ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ಹಠಮಾರಿತನದಿಂದ ಹೆಚ್ಎಂಟಿ, ಕುದುರೆಮುಖ ಸಂಸ್ಥೆಯ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಈಗಲಾದರೂ ಒಣ ಪ್ರತಿಷ್ಠೆ ಬಿಟ್ಟು ಕೇಂದ್ರ ಸರ್ಕಾರದ ಜೊತೆ ಸಹಕರಿಸಿ, ಕರ್ನಾಟಕದ ಅಭಿವೃದ್ಧಿಗೆ ಮೊದಲು ಆದ್ಯತೆ ಕೊಡಿ ಎಂದಿರುವ ಜೆಡಿಎಸ್, ಕರ್ನಾಟಕದ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ವಿಚಾರದಲ್ಲಿ ಹೆಚ್.ಡಿ.ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿಯವರು ಹಾಗೂ ನಮ ಪಕ್ಷ ಯಾವಾಗಲೂ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಹೇಳಿದೆ.