ಬೆಂಗಳೂರು, ಮೇ 12-ಲೋಕಸಭೆ ಚುನಾವಣೆಯಂತೆ ವಿಧಾನ ಪರಿಷತ್ತಿನ ಚುನಾವಣೆಯಲ್ಲೂ ಮೈತ್ರಿ ಮುಂದುವರೆದಿದ್ದು, ಜೆಡಿಎಸ್ ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲಿದೆ. ಈ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿರುವ ಎಸ್.ಎಲ್.ಭೋಜೇಗೌಡ ಅವರು ಮರು ಸ್ಪರ್ಧೆಗಿಳಿಯಲಿದ್ದಾರೆ.
ಪದವೀಧರರ ಮೂರು ಹಾಗೂ ಶಿಕ್ಷಕರ ಮೂರು ಸೇರಿದಂತೆ ವಿಧಾನ ಪರಿಷತ್‍ನ ಆರು ಸದಸ್ಯ ಸ್ಥಾನಗಳಿಗೆ ಜೂನ್ ಮೂರರಂದು ಚುನಾವಣೆ ನಡೆಯಲಿದೆ. ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಜೆಡಿಎಸ್‍ಗೆ ಒಂದು ಕ್ಷೇತ್ರವನ್ನು ಮಾತ್ರ ಬಿಟ್ಟುಕೊಟ್ಟಿದೆ.
ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್„ಸಿ ಚುನಾಯಿತರಾಗಿದ್ದ ಮರಿತಿಬ್ಬೇಗೌಡ ಅವರು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ, ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಈಗ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಈಗಾಗಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧೆಗಿಳಿಯಬೇಕೆಂಬ ಆಕಾಂಕ್ಷಿಯಾಗಿದ್ದ ಜೆಡಿಎಸ್‍ನವರಿಗೆ ನಿರಾಸೆ ಉಂಟಾಗಿದೆ. ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಎರಡು ಕ್ಷೇತ್ರಗಳನು ಜೆಡಿಎಸ್‍ಗೆ ಬಿಟ್ಟುಕೊಡುವುದಾಗಿ ಹೇಳಿದ್ದರು. ನಿನ್ನೆ ರಾತ್ರಿ ಬಿಜೆಪಿ ಐದು ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.