ಬೆಂಗಳೂರು,ಏ.22 ಹೆಚ್ಚುತ್ತಿರುವ ವಲಸಿಗರ ಹಾವಳಿ, ಕನ್ನಡಿಗರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಹೊಸ ಕಾನೂನನ್ನು ಅತ್ಯವಶ್ಯಕವಾಗಿ ರೂಪಿಸಬೇಕು ಎಂದು ಜೆಡಿಎಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್. ನಮ್ಮ ನೆಲದಲ್ಲೇ ದಿನವೂ ಕನ್ನಡಿಗರ ಮೇಲೆ ವಲಸಿಗರಿಂದ ನಡೆಯುತ್ತಿರುವ ದೌರ್ಜನ್ಯದ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದಿದೆ.
ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ ಉತ್ತರದ ರಾಜ್ಯಗಳ ವಲಸಿಗರ ದೌರ್ಜನ್ಯ ಖಂಡನೀಯ, ಬೆಂಗಳೂರಿನ ಸಿ.ವಿ.ರಾಮನ್ ನಗರದಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ
ಬೋಸ್ ಎಂಬಾತ ರಸ್ತೆಯಲ್ಲೇ ಕ್ಷುಲ್ಲಕ ಕಾರಣಕ್ಕೆ ಕನ್ನಡಿಗ ಟೆಕ್ಕಿ ವಿನಯ್ ಕುಮಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದೆ.
ಭಾಷಾ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ಸಾರ್ವಜನಿಕವಾಗಿ ರೌಡಿಯಂತೆ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ನನ್ನು ಶೀಘ್ರವೇ ಬಂಧಿಸಿ, ಕನ್ನಡಿಗರಿಗೆ ನ್ಯಾಯಕೊಡಿಸಿ ಎಂದು ಜೆಡಿಎಸ್ ಒತ್ತಾಯಿಸಿದೆ.
ಕರ್ನಾಟಕದ ಅನ್ನ ತಿಂದು, ನೀರು ಕುಡಿದು, ಉದ್ಯೋಗ ಪಡೆದು ಕನ್ನಡಿಗರ ಮೇಲೆ ಈ ರೀತಿ ದೌರ್ಜನ್ಯ ಎಸಗುವ, ಉಂಡ ಮನೆಗೆ ದ್ರೋಹ ಬಗೆಯುವ ನೀಚರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕಿದೆ ಎಂದು ಆಗ್ರಹಿಸಿದೆ.