ಬೆಂಗಳೂರು,ಮಾ.20- ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಬಜೆಟ್ ಮೇಲಿನ ಚರ್ಚೆಯಲ್ಲಿ ಸರ್ಕಾರಕ್ಕೆ ಅಮೂಲ್ಯ ಸಲಹೆ ನೀಡಿ ಗಮನಸೆಳೆದರು. ಯಾವುದೇ ರಾಜಕೀಯ ಬೆರಸದೆ ಆರ್ಥಿಕಾಭಿವೃದ್ಧಿ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದ ಅವರ ಭಾಷಣಕ್ಕೆ ಸಚಿವರಾದಿಯಾಗಿ ಹಲವರು ಪ್ರಶಂಸೆ ವ್ಯಕ್ತಪಡಿಸಿದರು.
ಈಗಾಗಲೇ ಮುಖ್ಯಮಂತ್ರಿ ಮಂಡಿಸಿರುವ ಬಜೆಟ್‌ನಲ್ಲಿ 1.10 ಲಕ್ಷ ಕೋಟಿ ರೂ. ಸಾಲ ಪಡೆಯುವ ಉದ್ದೇಶವಿದೆ. ಮುಂದಿನ 5 ವರ್ಷದಲ್ಲಿ 10 ಲಕ್ಷ ಕೋಟಿ ರೂ. ಸಾಲ ಮಾಡುವ ಸಾಧ್ಯತೆ ಇದೆ ಎಂದು ಸುರೇಶ್ ಬಾಬು ಹೇಳಿದರು. ಕೋವಿಡ್ ನಂತರ ಯುವಕರು ಕೃಷಿಯತ್ತ ಗಮನಹರಿಸಿದ್ದಾರೆ. ಸರ್ಕಾರ ಕೃಷಿಗೆ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರ ಯುವನಿಧಿ ಯೋಜನೆ ಘೋಷಣೆ ಮಾಡಿದೆ. ಅದಕ್ಕೆ 1.74 ಲಕ್ಷ ಜನ ನೋಂದಣಿ ಯಾಗಿದ್ದಾರೆ.
ರಾಜ್ಯದಲ್ಲಿ ವಿವಿಧ ಕೋರ್ಸ್‌ಗಳಿಂದ 8 ಲಕ್ಷ ಪದವೀಧರರು ಹೊರಬಂದಿದ್ದಾರೆ. ನೋಂದಣಿ ಮಾತ್ರ ಅತ್ಯಂತ ಕಡಿಮೆ ಇರುವುದು ಏಕೆ ಎಂಬ ಆತಂಕ ಇದೆ. ಯುವಕರಿಗೆ ಪರ್ಯಾಯ ಉದ್ಯೋಗ ಅವಕಾಶಗಳ ಬಗ್ಗೆ ಗಮನಹರಿಸಬೇಕು. ಮಳೆನೀರಿನ ಸಂರಕ್ಷಣೆ, ಹನಿನೀರಾವರಿ, ಸೌರಶಕ್ತಿಗೆ ಆದ್ಯತೆ ನೀಡಬೇಕು. ನೀರಿನ ಮಿತವ್ಯಯದ ವಿಧಾನಗಳನ್ನು ಬಳಸಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಯಾವ ಬೆಳೆಗೆ ಅವಕಾಶಗಳಿವೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಹೆಚ್ಚು ತರಕಾರಿ ಬೆಳೆಯಲಾಗುತ್ತಿದೆ. ಅದರ ರಫ್ತಿಗೆ ಹಾಗೂ ಮಾರುಕಟ್ಟೆ ಸೃಷ್ಟಿಗೆ ಒತ್ತು ನೀಡಬೇಕು, ರೈತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಕೃಷಿ ಉತ್ಪನ್ನಗಳಿಗೆ ಒತ್ತು ನೀಡಬೇಕು. ಶೀತಲಿಕರಣ ಸ್ಥಾಪನೆಗೆ ಆದ್ಯತೆ ನೀಡಬೇಕು, ಪಶುಸಂಗೋಪನಾ ಇಲಾಖೆಯಲ್ಲಿ ಕಾಲುಬಾಯಿ ಜ್ವರ ಹಾಗೂ ಇತರ ಸಾಂಕ್ರಾಮಿಕ ರೋಗಗಳಿಗೆ ಜಾನುವಾರುಗಳು ತುತ್ತಾಗುತ್ತಿವೆ. ಅವುಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಬೇಕು, ಪಶು ಚಿಕಿತ್ಸಾ ಕೇಂದ್ರಗಳಲ್ಲಿನ ವೈದ್ಯರ ಕೊರತೆಯನ್ನು ನೀಗಿಸಬೇಕು, ಕುರಿ ಮೇಕೆಗಳನ್ನು ತೂಕದ ಆಧಾರದ ಮೇಲೆ ವ್ಯಾಪಾರ ಮಾಡಲು ಕಾನೂನು ರೂಪಿಸಬೇಕು. ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ನವೀಲುಗಳ ಸಂಖ್ಯೆ ಹೆಚ್ಚಾಗಿದ್ದು, ರೈತರ ಬೆಳೆ ಹಾಳಾಗುತ್ತಿದೆ. ಅರಣ್ಯ ಮತ್ತು ಮಾನವ ಸಂಘರ್ಷ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬೇಸಿಗೆಯಲ್ಲಿ ಬೆಂಕಿ ಅನಾಹುತಗಳು ಹೆಚ್ಚಾಗುತ್ತವೆ. ಬಣವೆ ಹಾಗೂ ಮನೆಗಳು ಬೆಂಕಿಗೆ ಸಿಲುಕಿದಾಗ ಸೂಕ್ತ ಪರಿಹಾರ ನೀಡುವ ಕ್ರಮಗಳಾಗಬೇಕು ಎಂದು ಒತ್ತಾಯಿಸಿದರು.
ತೆಂಗಿನಲ್ಲಿ ನೀರಾ ಕಟ್ಟಲು ಅವಕಾಶ ಕಲ್ಪಿಸಿ ಸೇಂದಿವನ ನಿರ್ಮಿಸಿಕೊಡಬೇಕು, ಪಕ್ಕದ ಹಳ್ಳಿಗಳಿಗೂ ಓವರ್ ಟ್ಯಾಂಕ್‌ಗಳ ಸಂಪರ್ಕ ಕಲ್ಪಿಸುವ ಮೂಲಕ ನೀರಿನ ಬವಣೆಯನ್ನು ನೀಗಿಸಬೇಕು. ಯಾವುದೇ ಯೋಜನೆ ಆರಂಭಿಸಬೇಕಾದರೂ ರೈತರ ಭೂ ಜಮೀನಿನ ಸ್ವಾಧೀನಕ್ಕೆ ಮೊದಲೇ ಚರ್ಚೆಮಾಡಿ ಪರಿಹಾರ ಕೊಟ್ಟು ನಂತರ ಯೋಜನೆ ಆರಂಭಿಸಿ. ಘೋಷಣೆ ಮಾಡಿ. ಭೂಸ್ವಾಧೀನಕ್ಕೆ ಹೋಗಬೇಡಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ.ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆನ್‌ಲೈನ್ ಗೇಮಿಂಗ್‌ನಿಂದ ಯುವ ಸಮುದಾಯ ಹಾಳಾಗುತ್ತಿದೆ. ಈ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ತಿಪಟೂರಿನಲ್ಲಿರುವ ಜೈಲನ್ನು ನವೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಂತದಲ್ಲಿ ಶಾಸಕ ಷಡಾಕ್ಷರಿ ಮಧ್ಯಪ್ರವೇಶ ಮಾಡಿ, ಜೈಲನ್ನು ಮುಚ್ಚಿಲ್ಲ. ದುರಸ್ತಿಗಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹೊಸ ಜಾಗದಲ್ಲಿ ಜೈಲು ನಿರ್ಮಿಸಲು 4 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ದುರಸ್ತಿಗಾಗಿ ನೀಡಲಾಗಿದ್ದ ಹಣವನ್ನು ಕೇಂದ್ರ ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಮಾಡಿಕೊಡಲಾಗಿದೆ. ತಿಪಟೂರು ಉಪಜೈಲಿಗೆ ಮಂಜೂರಾಗಿದ್ದ ಹಣವನ್ನು ವಾಪಸ್ ನೀಡಬೇಕೆಂದು ಗೃಹಸಚಿವರಲ್ಲಿ ಒತ್ತಾಯಿಸುವುದಾಗಿ ಹೇಳಿದರು. ಚರ್ಚೆ ಮುಂದುವರೆಸಿದ ಸುರೇಶ್ ಬಾಬು, ಜಿಲ್ಲಾಸ್ಪತ್ರೆಗಳಲ್ಲಿ ಸರ್ಜನ್ ಸೇರಿದಂತೆ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಗತ್ಯ ಔಷಧಿಗಳನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಬಾಣಂತಿಯರ ಸಾವುಗಳಾಗಿವೆ. ಆ ಚಿಕ್ಕಮಕ್ಕಳ ಪಾಲನೆ ಯಾರು ಮಾಡಬೇಕು. ಅಂಥ ಮಕ್ಕಳಿಗೆ ಮಾಸಿಕ 5 ಸಾವಿರ ರೂ. ಸಹಾಯಧನ ನೀಡಿ, ಆ ಮಕ್ಕಳ ಹೆಸರಿಗೆ ನಿರ್ಧಿಷ್ಟ ಮೊತ್ತವನ್ನು ಠೇವಣಿ ಇಡಿ ಎಂದು ಆಗ್ರಹಿಸಿದರು. ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಕರು ಇದ್ದಾರೆ. ಇಂಗ್ಲೀಷ್ ಬೋಧನೆಗೆ ಶಿಕ್ಷಕರನ್ನು ನೇಮಿಸಿ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಮೂಲಕ ಖಾಸಗಿ ಶಿಕ್ಷಣ ಶಾಲೆಗಳ ವ್ಯಾಪಾರೀಕರಣವನ್ನು ನಿಲ್ಲಿಸಿ ಎಂದರು.
ಒಂದೇ ದಿನದಲ್ಲಿ ಪರೀಕ್ಷೆ ಮೌಲ್ಯಮಾಪನಕ್ಕೆ ಆಧುನಿಕ ವ್ಯವಸ್ಥೆಯಿದ್ದು, ಅದನ್ನು ಅಳವಡಿಸಿಕೊಳ್ಳಬೇಕು. ಇಂಧನ ಇಲಾಖೆಯಿಂದ ಓವರ್‌ಲೋಡ್ ತಪ್ಪಿಸಲು ಎಲ್ಲಾ ಕಡೆ ಉಪಸ್ಥಾವರಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಕೈಗಾರಿಕೆಗಳಿಗೆ ಒತ್ತು ನೀಡಿ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಜಿಲ್ಲಾವಾರು ಉತ್ಪಾದಕ ಕ್ಲಸ್ಟರ್‌ಗಳನ್ನು ನಿರ್ಮಿಸಬೇಕು ಎಂಬ ಪ್ರಸ್ತಾವನೆ ಇತ್ತು. ಅದನ್ನು ಜಾರಿ ಮಾಡಬೇಕು. ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಅವರನ್ನು ಆಂಧ್ರಪ್ರದೇಶ ಹಾಗೂ ಇತರ ರಾಜ್ಯಗಳು ಉಪಯೋಗಿಸಿಕೊಳ್ಳುತ್ತಿವೆ. ಕರ್ನಾಟಕ ರಾಜ್ಯ ಸರ್ಕಾರ ಕೂಡ ಅವರ ಜೊತೆ ಚರ್ಚಿಸಿ ವಿಎಸ್‌ಎನ್‌ಎಲ್, ಎಚ್‌ಎಂಟಿ ಸೇರಿದಂತೆ ಹಲವು ಕೈಗಾರಿಕೆಗಳ ಪುನರುಜ್ಜೀವನಕ್ಕೆ ಸಹಾಯ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.