ಬೆಂಗಳೂರು,ಜೂ.9- ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ಜೆಡಿಎಸ್ ಪಕ್ಷದ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಸೇರಿದಂತೆ ಪಕ್ಷದ ಮುಖಂಡರ ದಂಡೇ ಇಂದು ದೆಹಲಿಗೆ ತೆರಳಿದೆ. ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರಾದ ಜಿ.ಡಿ.ಹರೀಶ್‍ಗೌಡ, ಸ್ವರೂಪ್ ಪ್ರಕಾಶ್, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್‍ಗೌಡ, ವಿಧಾನ ಪರಿಷತ್‍ಗೆ ನೂತನವಾಗಿ ಆಯ್ಕೆಯಾಗಿರುವ ವಿವೇಕಾನಂದ, ಟಿ.ಎನ್.ಜವರಾಯಿಗೌಡರು ಮಾಜಿ ಶಾಸಕ ಅಶ್ವಿನ್, ಪಿರಿಯಾಪಟ್ಟಣ ಮಹದೇವ್ ಅವರು ಸೇರಿದಂತೆ ಪಕ್ಷದ ಹಲವು ಮುಖಂಡರು ಈಗಾಗಲೇ ದೆಹಲಿ ತಲುಪಿದ್ದಾರೆ.
ಇಂದು ಬೆಳಿಗ್ಗೆ ವಿವಿಧ ವಿಮಾನಗಳಲ್ಲಿ ಜೆಡಿಎಸ್ ಮುಖಂಡರು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಲೋಕಸಭಾ ಹಾಗೂ ವಿಧಾನ ಪರಿಷತ್ ಗೆಲುವಿನ ಉತ್ಸಾಹದಲ್ಲಿರುವ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಿರುವುದರಿಂದ ಸಂಭ್ರಮ ಇಮ್ಮಡಿಗೊಂಡಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಿರುವ ಹಾಗೂ ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಿರುವುದರ ಸಂಭ್ರಮ ಆಚರಿಸಲು ದೆಹಲಿಗೆ ಹೋಗಿದ್ದಾರೆ.
ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲೂ ಸಂಭ್ರಮ ಜೋರಾಗಿದೆ. ಅವರ ನಿವಾಸವನ್ನು ಶೃಂಗಾರಗೊಳಿಸಲಾಗಿದ್ದು, ಹಬ್ಬದ ವಾತಾವರಣ ಕಂಡುಬರುತ್ತಿದೆ. ಪ್ರಮಾಣ ವಚನದಲ್ಲಿ ಭಾಗಿಯಾಗಲು ರಾಜ್ಯದಿಂದ ಹೋಗಿರುವ ಪಕ್ಷದ ಮುಖಂಡರು ಸಹ ದೇವೇಗೌಡರ ನಿವಾಸಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಿವಾಸ ಹಾಗೂ ಅಂಗಳವನ್ನು ವಿಶಿಷ್ಟ ರೀತಿಯಲ್ಲಿ ಸಿಂಗರಿಸಲಾಗಿದೆ.
ದೇವೇಗೌಡರು ಪ್ರಧಾನಿಯಾದ ಬಳಿಕ ಗೌಡರ ಕುಟುಂಬ ಹಾಗೂ ಜೆಡಿಎಸ್‍ನಿಂದ ಯಾರು ಕೇಂದ್ರ ಸಚಿವರಾಗಿರಲಿಲ್ಲ. ಮೊದಲ ಬಾರಿ ಮುಖ್ಯಮಂತ್ರಿಯಾದಾಗಲೂ ಕುಮಾರಸ್ವಾಮಿ ಅವರು, ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರದಲ್ಲೇ ಆಗಿದ್ದರು. ಈಗ ಅದೇ ರೀತಿ ಎನ್‍ಡಿಎ ಮೈತ್ರಿ ಕೂಟದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಪಾಳೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿದ್ದು, ಉತ್ಸಾಹದ ಅಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತೇಲುತ್ತಿದ್ದಾರೆ.