ಹುಬ್ಬಳ್ಳಿ,ಮಾ.21- ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ವಿಧಾನಪರಿಷತ್ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಮಧ್ಯಾಹ್ನ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಹುಬ್ಬಳ್ಳಿಯ ಗೃಹಕಚೇರಿಗೆ ತೆರಳಿದ ಮರಿತಿಬ್ಬೇಗೌಡ ಅವರು ರಾಜೀನಾಮೆ ನೀಡಿದರು. ಮರಿತಿಬ್ಬೇಗೌಡ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಮುಂದಿನ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ರಾಜೀನಾಮೆ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮರಿತಿಬ್ಬೇಗೌಡರು, ಸ್ವ ಇಚ್ಛೆಯಿಂದ ಯಾವುದೇ ಒತ್ತಡವಿಲ್ಲದೆ ರಾಜೀನಾಮೆ ಸಲ್ಲಿಸಿದ್ದೇನೆ ಹಾಗೂ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀ ನಾಮೆ ನೀಡಿದ್ದೇನೆ ಎಂದರು. ವಿಧಾನಪರಿಷತ್ನಲ್ಲಿ ನನ್ನ ಮುಂದಿನ ಅವಗೆ ರಾಜೀನಾಮೆ ಸಲ್ಲಿಸಿದ್ದೇನೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಎರಡು ಬಾರಿ ಜೆಡಿಎಸ್ ಪ್ರತಿನಿಯಾಗಿ ಆಯ್ಕೆಯಾಗಿದ್ದೆ. ವರಿಷ್ಠರಾದ ದೇವೇಗೌಡರು, ಕುಮಾರಸ್ವಾಮಿ ಅವರು ನಮ್ಮನ್ನು ಕಡೆಗಣಿಸಿದ್ದಾರೆ.
ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಮ್ಮ ಸಲಹೆಗಳು ಜೆಡಿಎಸ್ ವರಿಷ್ಠರಿಗೆ ಹಿಡಿಸುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡದೆ ತಮಗೆ ಬೇಕಾದವರಿಗೆ ಟಿಕೆಟ್ ಕೊಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡುವುದು ಬೇಡ ಎಂದಿದ್ದೆ. ಅದಕ್ಕೆ ನನ್ನ ಮೇಲೆ ಅವರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಿದರು.
ನಮ್ಮ ಪಕ್ಷದ ನಾಯಕರು ಮೊಸಳೆಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಮೊಸಳೆ ಎಂದರೆ ಬಿಜೆಪಿ ಎಂದರು. ದೇವೇಗೌಡರು, ಕುಮಾರಸ್ವಾಮಿ- ರೇವಣ್ಣ ಅವರನ್ನು ಬಿಟ್ಟರೆ ಯಾರ ಮಾತನ್ನು ಕೇಳುವುದಿಲ್ಲ. ನಾನು ಯಾವುದೇ ಪಕ್ಷ ಸೇರುವ ತೀರ್ಮಾನ ತೆಗೆದುಕೊಂಡಿಲ್ಲ. ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.