ಬೆಂಗಳೂರು, ಡಿ.5- ಪಕ್ಷದಲ್ಲಿ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಹತ್ವದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಡಿ.9ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಗರದ ಜೆಪಿ ಭವನದಲ್ಲಿ ನಡೆಯುವ ಸಭೆಯಲ್ಲಿ ಪಕ್ಷದ ಶಾಸಕರು, ಸಂಸದರು ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೂ ಆಹ್ವಾನ ನೀಡಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತ್ತು ಮಾಡಿದ ನಂತರ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಇದಾಗಿದ್ದು, ಕೆಲವು ಮಹತ್ವದ ನಿರ್ಣಯಗಳನ್ನು ಪಕ್ಷ ಕೈಗೊಳ್ಳಲಿದೆ. ಮುಂಬರುವ ಲೋಕಸಭೆ ಚುನಾವಣೆ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆ, ಪಕ್ಷದ ವಿವಿಧ ಘಟಕಗಳ ಪುನಾರಚನೆ, ಎನ್.ಡಿ.ಎ ಮೈತ್ರಿಕೂಟ ಸೇರ್ಪಡೆ, ಪಕ್ಷ ಸಂಘಟನೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಮುಸ್ಲಿಮರಿಗೆ ಸಂಪತ್ತು ಹಂಚುತ್ತೇನೆ ಎಂದ ಸಿಎಂಗೆ ತಿರುಗೇಟು ಕೊಟ್ಟ ಅಶೋಕ್
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎನ್‍ಡಿಎ ಮೈತ್ರಿಕೂಟ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ. ಇಬ್ರಾಹಿಂ ವಿರೋಧ ವ್ಯಕ್ತಪಡಿಸಿ ಪ್ರತ್ಯೇಕ ಸಭೆ ನಡೆಸಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳ ಮೇಲೆ ಇಬ್ರಾಹಿಂ ಅವರನ್ನು ಕಳೆದ ತಿಂಗಳು ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಪಕ್ಷದಿಂದ ಅಮಾನತ್ತು ಮಾಡಿದ್ದಾರೆ.
ಇದರ ನಡುವೆ ಕೇರಳದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿ ಎನ್‍ಡಿಎ ಮೈತ್ರಿಯಿಂದ ಹೊರ ಬರಲು ದೇವೇಗೌಡರಿಗೆ ಗಡುವು ನೀಡಲಾಗಿತ್ತು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಡಿ.9ರಂದು ನಡೆಯುವ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ಬಂಧನಕ್ಕೆ ವಿಜಯೇಂದ್ರ ಒತ್ತಾಯ
ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಸಿ.ಕೆ.ನಾಣು ಅವರು, ದೇವೇಗೌಡರಿಗೆ ಪತ್ರ ಬರೆದು, ಬಿಜೆಪಿಯೊಂದಿಗಿನ ಮೈತ್ರಿಯಿಂದ ಹಿಂದೆ ಸರಿಯಲು ಕೋರಿದ್ದರು. ಈ ಸಂಬಂಧ ರಾಷ್ಟ್ರೀಯ ಕಾರ್ಯಕಾರಿಣಿ ತೀರ್ಮಾನ ಕೈಗೊಂಡಿದ್ದು, ಡಿಸೆಂಬರ್ 9ರ ಒಳಗೆ ನೀವು ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳಬೇಕು. ಈ ಸಂಬಂಧ ಸ್ಪಷ್ಟನೆ ನೀಡದಿದ್ದರೆ, ನಾವುಗಳು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದರು.