ಬೆಂಗಳೂರು,ಮೇ24- ಮಳೆಯಿಂದ ಹಾನಿಯಾಗಿರುವ ಮತ್ತು ಗ್ರೇಟರ್ ಬೆಂಗಳೂರಿನ ಕುರಿತು ಚರ್ಚಿಸುವ ಮಹತ್ವದ ಸಭೆಗೆ ಜೆಡಿಎಸ್‌ನ ಆಹ್ವಾನ ನೀಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಗೆ ಜೆಡಿಎಸ್‌ನ ವಿಧಾನಪರಿಷತ್ ಸದಸ್ಯರಿಗೆ ಆಹ್ವಾನ ನೀಡಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಉಪಮುಖ್ಯಮಂತ್ರಿಗಳೂ ಆಗಿರುವ ಬೆಂಗಳೂರು ಉಸ್ತುವಾರಿ ಸಚಿವರು, ಸಂವಿಧಾನ ರೀತಿಯಲ್ಲೇ ಕಾರ್ಯ ನಿರ್ವಹಿಸಬೇಕೆಂಬ ಸತ್ಯವನ್ನು ಮರೆತಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದ ಮಾತ್ರಕ್ಕೆ ಶಿಷ್ಟಾಚಾರ ಉಲ್ಲಂಘಿಸಬಹುದೆಂಬುದು ಅವರ ನಿಲುವಾಗಿದೆಯೆ? ಎಂದು ಟಿ.ಎ.ಶರವಣ ಹಾಗೂ ಜವರಾಯಿಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು, ಮಳೆಹಾನಿ ಮತ್ತು ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚಿಸಲು ಕರೆದಿರುವ ಸಭೆಗೆ ಬಿಜೆಪಿ ಮತ್ತು ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯರಿಗೆ ಆಹ್ವಾನವನ್ನೇ ನೀಡಿಲ್ಲ. ಇದರಿಂದ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ ಜೊತೆಗೆ ವಿಧಾನಪರಿಷತ್‌ನ ಪ್ರತಿಪಕ್ಷ ಸದಸ್ಯರ ಹಕ್ಕಿನ ಚ್ಯುತಿ ಆಗಿದೆ ಎಂದು ಶರವಣ ಕಿಡಿಕಾರಿದ್ದಾರೆ.
ಇಂದಿನ ಸಭೆಯ ಆಹ್ವಾನ ಪತ್ರದಲ್ಲಿ ನಮ ಹೆಸರೇ ಇಲ್ಲ. ಕೆಲವು ದಿನಗಳ ಹಿಂದೆ ಜೆಡಿಎಸ್ ಶಾಸಕಾಂಗ ಪಕ್ಷದ ನಿಯೋಗ ಬೆಂಗಳೂರಿನ ವಿವಿಧಡೆ ಮಳೆ ನೀರಿನಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿ ಮುಂದೆ ಕರೆಯುವ ಸಭೆಯಲ್ಲಿ ಚರ್ಚಿಸುವ ಬಗ್ಗೆ ತೀರ್ಮಾನಿಸಿದೆವು. ಇದು ಅಧಿಕಾರದ ದುರ್ಬಳಕೆ ಮತ್ತು ಸ್ವೇಚ್ಛಾಚಾರ ವರ್ತನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಭೆಯಲ್ಲಿ ತಾರತಮ್ಯ ಎಸಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತೆ. ವಿಧಾನ ಪರಿಷತ್‌ನ ಕಾಂಗ್ರೆಸ್ ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರ ಗಮನಕ್ಕೆ ತಂದು ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸುವ ಬಗ್ಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ.