ಬೆಂಗಳೂರು, ಏ.9-ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ನಗರದಲ್ಲಿ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದು ಸಾಕಪ್ಪ ಸಾಕು! ಕಾಂಗ್ರೆಸ್ ಸರ್ಕಾರ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ. ನಗರದ ವಿವಿಧೆಡೆ ಈ ರೀತಿಯ ಪೋಸ್ಟರ್‌ಗಳನ್ನು ಹಾಕಲಾಗಿದೆ. ಅದರಲ್ಲೂ ಬಸ್ ನಿಲ್ದಾಣಗಳಲ್ಲಿ ಈ ರೀತಿಯ ಪೋಸ್ಟರ್ ಅನ್ನು ಅಂಟಿಸಲಾಗಿದೆ.
ಬೆಲೆ ಏರಿಕೆಯನ್ನು ವಿರೋಧಿಸಿ ಜೆಡಿಎಸ್ ಏ.12ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದೆ. ಅದಕ್ಕೂ ಮುನ್ನ ಪೋಸ್ಟರ್ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಏ.12ರಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ತೊಡಗಿದೆ ಎಂದು ಆರೋಪಿಸಿ ವಿಧಾನಸೌಧ ಚಲೋ ಪ್ರತಿಭಟನೆಯನ್ನು ಜೆಡಿಎಸ್ ಹಮ್ಮಿಕೊಳ್ಳಲಿದೆ.
ಈಗಾಗಲೇ ಎನ್‌ಡಿಎ ಮಿತ್ರ ಪಕ್ಷವಾದ ಬಿಜೆಪಿ ಬೆಲೆ ಏರಿಕೆಯ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಆದರೆ ಜೆಡಿಎಸ್ ಬಿಜೆಪಿ ಜೊತೆಗೂಡಿ ಭಾಗಿಯಾಗದೆ ಪ್ರತ್ಯೇಕವಾಗಿ ಪ್ರತಿಭಟನೆಯನ್ನು ಆರಂಭಿಸಿದೆ.
ರಾಜ್ಯ ಸರ್ಕಾರದ ವಿರುದ್ಧ ಮಿತ್ರ ಪಕ್ಷಗಳೆರಡು ಜಂಟಿಯಾಗಿ ಹೋರಾಟ ಮಾಡಿದ್ದೇವೆ, ಮಾಡುತ್ತೇವೆ ಎಂದು ಹೇಳುತ್ತಿವೆಯಾದರೂ ಬೆಲೆ ಏರಿಕೆ ವಿರುದ್ಧದ ಹೋರಾಟದಲ್ಲಿ ಎರಡೂ ಪಕ್ಷಗಳು ಭಿನ್ನ ರೀತಿಯ ಹೋರಾಟಗಳನ್ನು ಹಮ್ಮಿಕೊಂಡಿವೆ.