ಬೆಂಗಳೂರು,ಆ.26- ಸಂವಿಧಾನ ಬದಲಾವಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವುದನ್ನು ಖಂಡಿಸಿ ಮಾ.28ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ಪರಿಶಿಷ್ಟ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಪ್ರತಿಮೆ ಬಳಿ ಮಾ.28ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಶಿವಕುಮಾರ್ ದೇಶದ ಜನರ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದರು. ಡಿ.ಕೆ.ಶಿವಕುಮಾರ್ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಡಲು ಸಿದ್ಧವಿದ್ದು, ಸಂವಿಧಾನ ಅಡ್ಡಿಯಾದರೆ ಬದಲಾವಣೆ ಮಾಡಿ ಮೀಸಲಾತಿ ಕೊಡುತ್ತೇವೆ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ಏಕೆ ಮೌನ ವಹಿಸಿದ್ದಾರೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಕಾಂಗ್ರೆಸ್‌ನಿಂದ ಬದಲಾವಣೆ ಮಾಡುವ ಮಾತು ಕೇಳಿಬಂದಿದೆ ಎಂದು ಟೀಕಿಸಿದರು.
ಅಂಬೇಡ್ಕರ್ ಅವರು ಕಾಂಗ್ರೆಸ್ ನಂಬಿ ಮೋಸ ಹೋಗಬೇಡಿ ಎಂದು ಹೇಳಿದ್ದಾರೆ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸಂವಿಧಾನದ ವಿರುದ್ಧವಾಗಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದರು. ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಲು ಸಂವಿಧಾನವೇ ಕಾರಣ. ಸ್ವಾತಂತ್ರ ಬಂದ ನಂತರ 99 ಬಾರಿ ಸಂವಿಧಾನಕ್ಕೆ ತಿದ್ದುಪಡಿಯಾಗಿದೆ.
ಪಂಡಿತ್ ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದ ಕಾಲದಿಂದಲೂ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಸಂವಿಧಾನ ವಿರೋಧಿ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ನರೇಂದ್ರಮೋದಿಯವರು ಪ್ರಧಾನಿಯಾದ ನಂತರ ಒಮೆಯೂ ಸಂವಿಧಾನವನ್ನು ತಿದ್ದುಪಡಿ ಮಾಡಿಲ್ಲ. ಹೀಗಿರುವಾಗ ಶಿವಕುಮಾರ್ ಅವರ ಈ ಹೇಳಿಕೆ ನೋವುಂಟು ಮಾಡಿದೆ ಎಂದರು.
ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಕರೆದಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ.
ಹಲವು ಮಹಾನ್ ನಾಯಕರನ್ನು ರಾಜ್ಯ, ರಾಷ್ಟ್ರಕ್ಕೆ ನೀಡಿದ ಜಿಲ್ಲೆಯ ಜನರನ್ನು ಅವಮಾನ ಮಾಡುವುದು ಸರಿಯಲ್ಲ. ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು. ನಮಗೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಭಯವಿದೆ ಹೊರತು ನಮಗೆ ಬೇರೆ ಯಾರ ಭಯವೂ ಇಲ್ಲ. 1985ರಲ್ಲಿ ಮಾಜಿ ಸಂಸದ ಎಂ.ವಿ.ಚಂದ್ರಶೇಖರ ಮೂರ್ತಿ ಯವರು ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಡಿಸಿದ್ದರು. ಹೀಗಾಗಿ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದರು.
ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಶೀಘ್ರದಲ್ಲೇ ಜಾರಿಗೊಳಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಜೆಡಿಎಸ್‌ನಲ್ಲಿ ಹನಿಟ್ರಾಪ್ ಆಗುವವರು ಯಾರೂ ಇಲ್ಲ. ಹನಿಟ್ರಾಪ್ ವಿಚಾರ ರಾಜಕಾರಣಿ ಗಳಿಗೆ ಶೋಭೆ ತರುವುದಿಲ್ಲ. ನಾನು 30 ವರ್ಷದಿಂದ ರಾಜಕೀಯದಲ್ಲಿದ್ದು, ಎಲ್ಲಿಯೂ ರಾಜಕೀಯ ವ್ಯಭಿಚಾರದ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದರು.
ಹನಿಟ್ರಾಪ್ ವಿಚಾರದಲ್ಲಿ ರಾಜ್ಯ ಮತ್ತು ರಾಷ್ಟ್ರದ ಗೌರವ ಹಾಳಾಗುತ್ತಿದೆ. ದೇಶಕ್ಕೆ ಕಳಂಕ ತಂದವರು ಕಾಂಗ್ರೆಸ್‌ನವರು ಎಂದು ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಎಸ್ಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಕಿರಣ್, ಮುಖಂಡರಾದ ಉಪೇಂದ್ರ, ಜಯಕುಮಾರ್ ಉಪಸ್ಥಿತರಿದ್ದರು.