ಬೆಂಗಳೂರು,ಜೂ.17– ಏರಿಕೆ ಮಾಡಿರುವ ಪೆಟ್ರೋಲ್, ಡೀಸೆಲ್ ದರವನ್ನು ಇಳಿಕೆ ಮಾಡುವಂತೆ ಒತ್ತಾಯಿಸಿ ಜೆಡಿಎಸ್ ನಾಳೆ ಪ್ರತಿಭಟನೆ ನಡೆಸಲಿದೆ.ಬೆಂಗಳೂರು ಮಹಾನಗರ ಜೆಡಿಎಸ್ ವತಿಯಿಂದ ರಾಜ್ಯಸರ್ಕಾರದ ವಿರುದ್ಧ ನಾಳೆ ಬೆಳಿಗ್ಗೆ 10.30 ಕ್ಕೆ ಸ್ವಾತಂತ್ರ್ಯ ಉದ್ಯಾನವನದಿಂದ ವಿಧಾನಸೌಧದವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಎಚ್.ಎನ್.ರಮೇಶ್‌ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು ಸೇರಿದಂತೆ ವಿವಿಧ ವಿಭಾಗಗಳ ಪದಾಧಿಕಾರಿಗಳು, ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.