ಬೆಂಗಳೂರು, ನ.22– ಜೆಡಿಎಸ್ ಪಕ್ಷದ ರಜತ ಮಹೋತ್ಸವವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಗರದ ಜೆ.ಪಿ.ಭವನದಲ್ಲಿಂದು ಉದ್ಘಾಟಿಸಿದರು.
ಪಕ್ಷಕ್ಕೆ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಳ್ಳಿ ನಾಣ್ಯ, ಡಿಜಿಟಲ್ ಮಾಹಿತಿ ಒದಗಿಸುವ ಟೋಲ್ ನಂಬರ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಬಳಿಕ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಾತನಾಡಿ, 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
2006ರಲ್ಲಿ ಕುಮಾರಸ್ವಾಮಿ ಅವರು ರೈತರ, ಮಹಿಳೆಯರ, ದಲಿತರ ಪರವಾದ ಕಾರ್ಯಕ್ರಗಳನ್ನು ನೀಡಿದ್ದರು. ಅಂತಹ ವಾತಾವರಣ ನೋಡಲು ಮತ್ತೆ ಅವರು ಮುಖ್ಯಮಂತ್ರಿಯಾಗಬೇಕು ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ಬಜೆಟ್ ಮಂಡಿಸಿದರೂ ಉತ್ತಮ ಆರ್ಥಿಕ ತಜ್ಞರಲ್ಲ. ಏಕೆಂದರೆ ರಾಜ್ಯದ ಸಮಗ್ರ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರು ಹೇಳಿದರು. ಪ್ರತಿ ಸೋಮವಾರ ಮತ್ತು ಶುಕ್ರವಾರ ಕಚೇರಿಯಲ್ಲಿದ್ದು ಪಕ್ಷದ ಸೇವೆ ಮಾಡುವುದಾಗಿ ಅವರು ಪ್ರಕಟಿಸಿದರು.
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೋರಾಟದ ಮೂಲಕ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಕಾವೇರಿ, ಕೃಷ್ಣಾ ನದಿ ನೀರಿನ ವಿಚಾರದಲ್ಲಿ ರೈತರೊಂದಿಗೆ ದೊಡ್ಡ ಹೋರಾಟ ಮಾಡಿ ದ್ದಾರೆ ಎಂದು ಹೇಳಿ ದೇವೇಗೌಡರ ಹೋರಾಟದ ಹಲವಾರು ಘಟನೆಗಳನ್ನು ಉಲ್ಲೇಖಿಸಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಮತ್ತು ಮತ್ತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸೋಣ ಎಂದು ಕರೆ ನೀಡಿದರು. ಪಕ್ಷ ಸಂಘಟನೆಯ ಎರಡನೇ ಹಂತದ ಪ್ರವಾಸವನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು. ಸಮಿಶ್ರ ಸರ್ಕಾರದ ಒತ್ತಡದಲ್ಲೂ ಜನಪರ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ನೀಡಿದ್ದಾರೆ. ಅವರ ಪುತ್ರನಾಗಿರುವುದೇ ನನ್ನ ಪೂರ್ವ ಜನದ ಪುಣ್ಯ ಎಂದರು.
ರಾಜ್ಯಾಧ್ಯಕ್ಷ ಸ್ಥಾನವನ್ನು ಕುಮಾರಣ್ಣ ಅವರಿಗಿಂತ ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ . ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆಯಾಗಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಬಹಳಷ್ಟು ಜನರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಈ ದಿನ ಐತಿಹಾಸಿಕ ದಿನವಾಗಿದೆ ಎಂದು ಅವರು ಹೇಳಿದರು.
ಜೆ.ಪಿ.ಭವನ ನಮೆಲ್ಲರ ದೇವಾಲಯವಿದ್ದಂತೆ. ಹಾಗಾಗಿ ಬೆಳ್ಳಿಹಬ್ಬವನ್ನು ಈ ಭವನದಲ್ಲೇ ಮಾಡಲು ದೇವೇಗೌಡರು, ಕುಮಾರಣ್ಣ ನಿರ್ಧಾರ ಮಾಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿದ್ದರೆ, ಜನರ, ರೈತರ ಪರ ಹೋರಾಟ ಮಾಡಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವರಿಂದ ಉಪ ಮುಖ್ಯಮಂತ್ರಿ ಸ್ಥಾನದವರೆಗೂ ಬೆಳೆಸಿದ್ದು ಜೆಡಿಎಸ್. ಬೆಳೆದು ಬಂದ ದಾರಿ ಮರೆತಿದ್ದಾರೆ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ
ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ಮಾಜಿ ಸಚಿವರಾದ ಲೀಲಾದೇವಿ ಆರ್ ಪ್ರಸಾದ್, ಹೆಚ್.ಕೆ.ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ಆಲ್ಕೋಡು ಹನುಮಂತಪ್ಪ, ಶಾಸಕರಾದ ಜಿ.ಟಿ.ಹರೀಶ್‌ಗೌಡ, ಕರೆಮ, ಟಿ.ಎ.ಶರವಣ, ಟಿ.ಎನ್.ಜವರಾಯಿಗೌಡ, ಮಾಜಿ ಶಾಸಕರಾದ ಡಾ.ಅನ್ನದಾನಿ, ರಮೇಶ್‌ಗೌಡ, ತಿಪ್ಪೇಸ್ವಾಮಿ, ಚೌಡರೆಡ್ಡಿ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ರಾಜ್ಯಗಳ ಪಕ್ಷದ ಪದಾಧಿಕಾರಿಗಳು, ಮೊದಲಾದ ಮುಖಂಡರು ಭಾಗವಹಿಸಿದ್ದರು.
