ಬೆಂಗಳೂರು,ಮೇ9- ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಪಾರದರ್ಶಕ, ನಿಷ್ಪಪಕ್ಷಪಾತ ತನಿಖೆ ಎಸ್‌ಐಟಿಯಿಂದ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಜೆಡಿಎಸ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.
ಪೆನ್‌ಡ್ರೈವ್ ಬಹಿರಂಗಗೊಳಿಸಿದವರ ಮೇಲೆ ಕ್ರಮಕೈಗೊಂಡಿಲ್ಲ. ಮಹಿಳೆಯೊಬ್ಬರ ಅಪಹರಣದ ಆರೋಪದ ಪ್ರಕರಣದಲ್ಲೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಿ ಎಸ್‌ಐಟಿ ತನಿಖೆ ಬದಲಾಗಿ ಸಿಬಿಐ ತನಿಖೆ ವಹಿಸಲು ರಾಜ್ಯಪಾಲರಿಗೆ ಜೆಡಿಎಸ್ ಮನವಿ ಮಾಡಿದೆ.
ಪಕ್ಷದ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯಪಾಲ್ಯರಿಗೆ ಎಸ್‌ಐಟಿ ತನಿಖೆಯ ಹಾದಿ ದಾರಿ ತಪ್ಪಿದೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು. ತಪ್ಪು ಯಾರೇ ಮಾಡಿದರೂ ಶಿಕ್ಷೆ ಕೊಡಬೇಕು ಎಂದು ನಾನು ಆರೋಪ ಕೇಳಿ ಬಂದ ಮೊದಲ ದಿನವೇ ಹೇಳಿದ್ದೇನೆ. ಆದರೆ, ಈ ವಾತಾವರಣ ನೋಡಿದರೆ ಕಾಂಗ್ರೆಸ್ ನವರಿಗೆ ಶಿಕ್ಷೆ ಬೇಕಿಲ್ಲ ಪ್ರಚಾರ ಬೇಕು ಎಂಬಂತಾಗಿದೆ ಎಂದರು.
ಇಷ್ಟು ದಿನಗಳ ತನಿಖೆ ನೋಡಿದರೆ ಏನು ಇವರ ಸಾಧನೆ? ನಾನೇ ನಿರ್ಮಾಪಕ, ನಾನೇ ನಿರ್ದೇಶಕ, ನಾನೇ ಕಥಾನಾಯಕ ಎಂದು ಆರೋಪಿಸಿದ್ದಾರೆ. ಇಂತಹ ಕಥೆಗಳಿಗೆ ಕಥಾನಾಯಕನು ಬೇಕಲ್ಲ, ನನ್ನನ್ನ ಕಥಾನಾಯಕ ನನ್ನಾಗಿ ಮಾಡಿಕೊಂಡಿದ್ದಾರಲ್ಲ ಡಿಸಿಎಂ ಶಿವಕುಮಾರ್ ಅವರು ಸಂತೋಷ. ನನ್ನನ್ನು ಕಥಾನಾಯಕನನ್ನಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಕಿಡ್ನಾಪ್ ಆಗಿರುವ ಕುಟುಂಬದವರನ್ನು ಕುಮಾರಕೃಪ ಅತಿಥಿ ಗೃಹದಲ್ಲಿ ಇಟ್ಟಿರುವ ಮಾಹಿತಿ ಇದೆ. ಕಿಡ್ನಾಪ್ ಆಗಿರುವ ಮಹಿಳೆಯನ್ನು ಏಕೆ ಇನ್ನು ಕೋರ್ಟ್ ಮುಂದೆ ಹಾಜರುಪಡಿಸಿಲ್ಲ. ತೋಟದ ಮನೆಯಿಂದ ಕರೆದುಕೊಂಡು ಬಂದರು ಎಂದುಎಸ್ ಐಟಿ ಮೂಲ ಹೇಳಿದೆ. ಆದರೆ ಮಹಜರು ಮಾಡಿದ್ದಾರೆಯೆ? ಎಂದು ಅವರು ಪ್ರಶ್ನಿಸಿದರು.
ಎಲ್ಲಿಂದ ಕರೆದುಕೊಂಡು ಬಂದರೂ ಎಂದು ಎಸ್‌ಐಟಿ ಹೇಳಬೇಕಲ್ಲ. ಐದು ದಿನ ಕಳೆದರೂ ಕೋರ್ಟ್ ಮುಂದೆ ಏಕೆ ಮಹಿಳೆ ಕರೆತರುತ್ತಿಲ್ಲ. ಏಕೆ ನ್ಯಾಯಾಧೀಶರ ಮುಂದೆ ಮಹಿಳೆ ಹೇಳಿಕೆ ನೀಡಿಲ್ಲ. ಸೋಮವಾರದವರೆಗೂ ಕಾಲಾವಕಾಶ ಕೇಳಿರುವುದರ ಹಿಂದೆ ಶಾಸಕ ಹೆಚ್.ಡಿ.ರೇವಣ್ಣ ಅವರು ಇನ್ನು ಜೈಲಿನಲ್ಲಿ ಇರಬೇಕುು ಎಂಬ ಉದ್ದೇಶವಿದ್ದಂತಿದೆ. ಈ ಹಠ ಸಾಧನೆ ಮಾಡುತ್ತಿದ್ದಾರೆ. ಜೂನ್ 4ರ ಬಳಿಕ ಈ ವಿಚಾರ ಸತ್ತು ಹೋಗುತ್ತೋ ಇರುತ್ತೋ ಗೊತ್ತಿಲ್ಲ ಎಂದರು.
ಹಿಂದೆ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವಾಗ ಬಿಜೆಪಿ ಸರ್ಕಾರ ಇದ್ದಾಗ ಬರೀ ಒಕ್ಕಲಿಗರನ್ನೆ ಬಿಟ್ಟು ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು ಅದೇ ತಂತ್ರವನ್ನು ಕಾಂಗ್ರೆಸ್‌ನವರು ಬಳಸುತ್ತಿದ್ದಾರೆ ಎಂದು ದೂರಿದರು.