Thursday, May 22, 2025
Homeರಾಜ್ಯಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜೆಡಿಎಸ್‌‍ ತಂಡ ಭೇಟಿ

ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜೆಡಿಎಸ್‌‍ ತಂಡ ಭೇಟಿ

JDS team visits rain-hit areas in Bengaluru

ಬೆಂಗಳೂರು, ಮೇ 22-ಭಾರಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಜೆಡಿಎಸ್‌‍ ನಾಯಕರು ಹಾಗೂ ಮುಖಂಡರ ತಂಡ ಭೇಟಿ ನೀಡಿ, ಪರಿಶೀಲಿ, ಸಂಕಷ್ಟಕ್ಕೆ ಸಿಲುಕಿರುವವರ ಸಮಸ್ಯೆಗಳನ್ನು ಆಲಿಸಿತು.

ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಶಾಸಕ ಜಿ.ಡಿ.ಹರೀಶ್‌ಗೌಡ, ಜೆಡಿಎಸ್‌‍ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಗರದಲ್ಲಿ ಮಳೆ ಹಾನಿಗೀಡಾದ ಪ್ರದೇಶಗಳಿಗೆ ಜೆಡಿಎಸ್‌‍ ವೀಕ್ಷಣಾ ತಂಡ ಭೇಟಿ ನೀಡಿತು.

ಇಂದು ಬೆಳಿಗ್ಗೆ ಜಯನಗರದ ಗುರ್ರಪ್ಪನಪಾಳ್ಯ ವಾರ್ಡ್‌ನ ಅರಸು ಕಾಲೋನಿಗೆ ಭೇಟಿ ನೀಡಿದ ಜೆಡಿಎಸ್‌‍ ತಂಡ ಮಳೆ ನೀರು ನುಗ್ಗಿ ಆಗಿರುವ ತೊಂದರೆಗಳನ್ನು ವೀಕ್ಷಿಸಿ ಸ್ಥಳೀಯರಿಂದ ಮಾಹಿತಿ ಪಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರು, ರಾಜಕಾಲುವೆ ಒತ್ತುವರಿ ಮಾಡಿ ಮುಚ್ಚಿರುವುದರಿಂದ ಮನೆಗಳಿಗೆ ಮೋರಿ ನೀರು, ಮಳೆ ನೀರು ನುಗ್ಗಿ ರಾತ್ರಿಯಿಡೀ
ಜಾಗರಣೆ ಮಾಡಿದ್ದೇವೆ ಎಂದು ಅಳಲು ತೋಡಿಕೊಂಡರು. ನಿಮೊಂದಿಗೆ ನಾವಿದ್ದೇವೆ. ನಿಮಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ನಿಖಿಲ್‌ ಕುಮಾರಸ್ವಾಮಿ ಭರವಸೆ ನೀಡಿದರು. ನಂತರ ಒತ್ತುವರಿ ಮಾಡಿರುವ ಆರೋಪದ ಜಾಗವನ್ನು ಪರಿಶೀಲಿಸಿದರು.

ಬಳಿಕ ಮೈಕೋ ಲೇಔಟ್‌ನಲ್ಲಿ ಅಪಾರ್ಟ್‌ ಮೆಂಟ್‌ಗೆ ಮಳೆ ನೀರು ತುಂಬಿದ್ದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಮರಣ ಹೊಂದಿದವರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಸಿಲ್‌್ಕಬೋರ್ಡ್‌ ಜಂಕ್ಷನ್‌ನಲ್ಲಿ ಭಾರಿ ಮಳೆಯ ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ಮತ್ತು ಪಣತ್ತೂರು ರೈಲ್ವೆ ಅಂಡರ್‌ಪಾಸ್‌‍ನಲ್ಲಿ ಮಳೆ ನೀರಿನಿಂದಾಗಿರುವ ತೊಂದರೆಯನ್ನು ಜೆಡಿಎಸ್‌‍ ನಾಯಕರು ಮುಖಂಡರು ವೀಕ್ಷಿಸಿದರು.

ನಂತರ ಸರ್ವಜ್ಞನಗರದ ಸಾಯಿ ಲೇಔಟ್‌ನಲ್ಲಿ ಮಳೆ ನೀರು ನುಗ್ಗಿ ಮನೆಗಳಿಗೆ ಹಾನಿಯಾಗಿರುವುದನ್ನು ಪರಿಶೀಲಿಸಿದರು. ಹೆಣ್ಣೂರು ಸೇತುವೆಗೆ ಹಾನಿಯಾಗಿರುವುದನ್ನು ವೀಕ್ಷಿಸಿದ ಜೆಡಿಎಸ್‌‍ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಳೆ ನೀರು ಹಾನಿಯಿಂದ ಜನರಿಗೆ ಆಗುವ ತೊಂದರೆ ನಿವಾರಿಸಲು ಸರ್ಕಾರ ವಿಫಲವಾಗಿದೆ. ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸಿ ರಾಜಕಾಲುವೆಗಳ ಹೂಳು ತೆಗೆಯಬೇಕಿತ್ತು. ಕೆಲವು ಪ್ರದೇಶಗಳು ಪದೇ ಪದೇ ಮಳೆ ನೀರಿನ ಹಾನಿಗೆ ಒಳಗಾಗುತ್ತಿದ್ದರೂ ಶಾಶ್ವತ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಿದರು.

RELATED ARTICLES

Latest News