ಬೆಂಗಳೂರು, ಫೆ.17- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಸಮಾವೇಶಕ್ಕೆ ಪ್ರತಿಯಾಗಿ ಬೃಹತ್ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಜೆಡಿಎಸ್ ಮುಂದಾಗಿದೆ.ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿಲ್ಲ ಎಂಬುದನ್ನು ಸಾಬೀತು ಪಡಿಸುವುದು ಹಾಗೂ ಕಾರ್ಯಕರ್ತರಲ್ಲಿ ಪಕ್ಷ ಸಂಘಟನೆಗೆ ಚೈತನ್ಯ ತುಂಬುವುದು ಸಮಾವೇಶದ ಉದ್ದೇಶ.
ಹಳೇ ಮೈಸೂರು ಭಾಗದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಂತೆ ಜೆಡಿಎಸ್ ಪ್ರಬಲವಾಗಿದೆ ಎಂಬುದನ್ನು ತೋರಿಸುವುದು ಹಾಗೂ ಪಕ್ಷದಿಂದ ದೂರ ಸರಿದಿರುವ ಮುಖಂಡರು ಮತ್ತು ಕಾರ್ಯಕರ್ತರನ್ನು ಮರಳಿ ಪಕ್ಷದತ್ತ ಆಕರ್ಷಿಸುವುದು ಸಮಾವೇಶದ ಹಿಂದಿನ ತಂತ್ರಗಾರಿಕೆಯಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟಿದ ಹಬ್ಬ ಮೇ ತಿಂಗಳಲ್ಲಿ ನಡೆಯಲಿದೆ. ಅದೇ ಸಂದರ್ಭದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶದ ಪೂರ್ವಸಿದ್ಧತೆಗಾಗಿ ಮಾರ್ಚ್ 6ರಂದು ಪಕ್ಷದ ಮುಖಂಡರ ಸಭೆ ಕರೆಯಲಾಗಿದೆ.ಸಭೆಯಲ್ಲಿ ಮೇನಲ್ಲಿ ನಡೆಸಲಿರುವ ಸಮಾವೇಶದ ಹೆಸರು, ಸ್ವರೂಪ, ಸ್ಥಳ ಸೇರಿದಂತೆ ಸಮಗ್ರವಾಗಿ ಚರ್ಚೆ ನಡೆಸಲಾಗುತ್ತದೆ. ಸಿದ್ದತೆಯ ಬಗ್ಗೆ ಪಕ್ಷದ ವರಿಷ್ಠರು ಮುಖಂಡರಿಗೆ ಸಲಹೆ, ಸೂಚನೆ ನೀಡಿ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ.
ಡಿಸೆಂಬರ್‌ನಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಂಡ್ಯದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಕೊನೆ ಕ್ಷಣದಲ್ಲಿ ಸಮಾವೇಶ ನಡೆಸುವುದನ್ನು ರದ್ದುಪಡಿಸಲಾಗಿತ್ತು,ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ, ತುಮಕೂರು, ಹಾಸನ ಈ ಮೂರು ಜಿಲ್ಲೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಮಾವೇಶದ ಸ್ಥಳ ನಿಗದಿ ಮಾಡುವ ಸಾಧ್ಯತೆಗಳಿವೆ.
ಬೆಂಗಳೂರು ಸೇರಿದಂತೆ ಎರಡು -ಮೂರು ಸ್ಥಳಗಳ ವಿಚಾರ ಚರ್ಚೆಯಲ್ಲಿದ್ದು, ಇನ್ನೂ ಸಮಾವೇಶದ ಸ್ಥಳ ಅಂತಿಮವಾಗಿಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.ಸಮಾವೇಶಕ್ಕೆ ಇನ್ನೂ ಮೂರು ತಿಂಗಳ ಅವಕಾಶವಿದ್ದರೂ ಈಗಿನಿಂದಲೇ ಸಿದ್ದತೆ ಆರಂಭಿಸಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸೋಲಿನಿಂದ ಪಕ್ಷ ಕಂಗೆಟ್ಟಿಲ್ಲ; ಉತ್ಸಾಹದಿಂದ ಕಾರ್ಯೋನ್ಮುಖವಾಗಿದೆ ಎಂಬುದನ್ನು ಬಹಿರಂಗೊಳಿಸುವ ಉದ್ದೇಶವೂ ಸಮಾವೇಶದಲ್ಲಿ ಅಡಗಿದೆ.
ಈಗಾಗಲೇ ಸದಸ್ಯತ್ವ ನೋಂದಣಿ ಅಭಿಯಾನದ ಮೂಲಕ ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಅಲ್ಲದೆ, ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ಸಿದ್ಧತೆ ಆರಂಭಿಸಲಾಗಿದೆ.
ನೀರಾವರಿ ವಿಚಾರದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಸಂಘಟಿತ ಹೋರಾಟ ಮಾಡಲು ಈಗಾಗಲೇ ದೇವೇಗೌಡರು ಕರೆ ನೀಡಿದ್ದಾರೆ. ಗೋದಾವರಿ ಹಾಗೂ ಕಾವೇರ ನದಿ ಜೋಡಣೆಗೂ ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಹೋರಾಟ ನಡೆಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಉದ್ದೇಶವೂ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹೀಗಾಗಿ ಸಮಾವೇಶವನ್ನು ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯೋನ್ಮುಖವಾಗಿದೆ.