Tuesday, September 17, 2024
Homeರಾಜ್ಯಜ್ಯುವೆಲರಿ ಅಂಗಡಿಯಲ್ಲಿ ಬುರ್ಕಾ ಧರಿಸಿ ಸರಗಳ್ಳತನ- ಮಹಿಳೆಯರ ಬಂಧನ

ಜ್ಯುವೆಲರಿ ಅಂಗಡಿಯಲ್ಲಿ ಬುರ್ಕಾ ಧರಿಸಿ ಸರಗಳ್ಳತನ- ಮಹಿಳೆಯರ ಬಂಧನ

ಬೆಂಗಳೂರು, ಜು.23- ಚಿನ್ನಾಭರಣ ಮಳಿಗೆಗೆ ಗ್ರಾಹಕರಂತೆ ಬುರುಕ ಧರಿಸಿಕೊಂಡು ಹೋಗಿ ಕೆಲಸಗಾರರ ಗಮನ ಸೆಳೆದು ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 4.75 ಲಕ್ಷ ರೂ. ಬೆಲೆಬಾಳುವ 78 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಚಿನ್ನಾಭರಣ ಮಳಿಗೆಯೊಂದಕ್ಕೆ ಬುರ್ಕಾ ಧರಿಸಿದ್ದ ಇಬ್ಬರು ಮಹಿಳೆಯರು ಆಭರಣ ಖರೀದಿಸುವ ಗ್ರಾಹಕರಂತೆ ಹೋಗಿದ್ದು, ಅಲ್ಲಿನ ಕೆಲಸಗಾರ ಆಭರಣ ತೋರಿಸುತ್ತಿದ್ದಾಗ ಅವರುಗಳ ಗಮನ ಸೆಳೆದು ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ವಿಸ್ರೋ ಲೇಔಟ್‍ನ ದೇವರಕೆರೆ ಪಕ್ಕದ ಖಾಲಿ ಜಾಗದಲ್ಲಿ ಇಂಡಿಗೋ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಚಿನ್ನದ ಸರ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.

ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಪೊಲೀಸ್ ಅಭಿರಕ್ಷೆಗೆ ಪಡೆಯಲಾಗಿದ್ದು, ಮತ್ತೊಬ್ಬ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ ಚಿನ್ನದ ಸರವನ್ನು ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿರುವ ಜ್ಯುವೆಲರಿ ವರ್ಕ್‍ಶಾಪ್‍ಗೆ ನೀಡಿದ್ದಾಗಿ ತಿಳಿಸಿದ ಮೇರೆಗೆ ಪೊಲೀಸರು ವರ್ಕ್‍ಶಾಪ್‍ನಿಂದ ಆಭರಣವನ್ನು ಜಪ್ತಿ ಮಾಡಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೆ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂವರು ಸರಗಳ್ಳರ ಬಂಧನ 100 ಗ್ರಾಂ ಚಿನ್ನಾಭರಣ ಜಪ್ತಿ
ಬೆಂಗಳೂರು, ಜು.23- ದಕ್ಷಿಣ ವಿಭಾಗದ ಸುಬ್ರಮಣ್ಯಪುರ ಹಾಗೂ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಮೂವರು ಸರಗಳ್ಳರನ್ನು ಬಂಧಿಸಿ 2.90 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಬ್ರಮಣ್ಯಪುರ: ಪ್ಲಂಬರ್ ಎಂದು ಹೇಳಿಕೊಂಡು ಮನೆಯೊಂದಕ್ಕೆ ಹೋಗಿ ಮಹಿಳೆಗೆ ಪಿಸ್ತೂಲಿನ ಹಿಂಭಾಗದಿಂದ ತಲೆಗೆ ಹೊಡೆದು ಹೆದರಿಸಿ 73 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೃತ್ಯ ನಡೆಸಿ ಪರಾರಿಯಾಗುತ್ತಿದ್ದ ವೇಳೆ ತಕ್ಷಣ ಸಾರ್ವಜನಿಕರೊಬ್ಬರು 112ಗೆ ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಹೊಯ್ಸಳ ಸಿಬ್ಬಂದಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 5.50 ಲಕ್ಷ ರೂ. ಮೌಲ್ಯದ 73 ಗ್ರಾಂ ಚಿನ್ನದ ಮಾಂಗಲ್ಯ ಸರ ಕೃತ್ಯಕ್ಕೆ ಬಳಸಿದ ನಕಲಿ ಪಿಸ್ತೂಲ್ ಹಾಗೂ ಬಾಲ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ಸ್‍ಪೆಕ್ಟರ್ ರಾಜು ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿದ್ದರು.

ಪುಟ್ಟೇನಹಳ್ಳಿ: ಬೆಳಗಿನ ಜಾವ ಮಹಿಳೆಯೊಬ್ಬರು ಮನೆ ಬಳಿ ವಾಯು ವಿಹಾರ ಮಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂ„ಸಿ 2.40 ಲಕ್ಷ ರೂ. ಮೌಲ್ಯದ 27 ಗ್ರಾಂ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಮಾಂಗಲ್ಯಸರವನ್ನು ಕಿತ್ತುಕೊಳ್ಳುವ ಬರದಲ್ಲಿ ಸರದ ಅರ್ಧ ತುಂಡು ಮಹಿಳೆಯ ಕೈಯಲ್ಲಿ ಉಳಿದುಕೊಂಡಿದೆ. ಈ ಬಗ್ಗೆ ಅವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಎಲ್ ಅಂಡ್ ಟಿ ಸೌತ್ ಸಿಟಿ ಅಪಾರ್ಟ್‍ಮೆಂಟ್ ಮುಂದಿನ ರಸ್ತೆಯಲ್ಲಿ ಆರೋಪಿಗಳಿಬ್ಬರನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪೀಣ್ಯದಲ್ಲಿರುವ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನದ ಮಾಂಗಲ್ಯ ಸರವನ್ನು ಅಡವಿಟ್ಟಿರುವುದಾಗಿ ತಿಳಿಸಿದ ಮೇರೆಗೆ ಪೆÇಲೀಸರು 2.40 ಲಕ್ಷ ಮೌಲ್ಯದ 27 ಗ್ರಾಂ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.
ಇನ್ಸ್‍ಪೆಕ್ಟರ್ ರವಿಕುಮಾರ್ ನೇತೃತ್ವದ ಸಿಬ್ಬಂದಿ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಮನೆಗಳವು: ಭಾವ-ಭಾಮೈದುನನ ಸೆರೆ – 14.37 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು, ಜು.23- ಮನೆಗಳ ಬೀಗ ಮೀಟಿ ಕಳ್ಳತನ ಮಾಡುತ್ತಿದ್ದ ಭಾವ-ಭಾಮೈದುನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 14.37 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಲಾರ ಮೂಲದ ಸಿಮ್‍ಸೇನ್(23) ಮತ್ತು ಈತನ ಭಾವ ಶರತ್ ಕುಮಾರ್ ಬಂಧಿತ ಆರೋಪಿಗಳು. ಸಿಮ್‍ಸೇನ್ ನಗರದಲ್ಲಿ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು ಶರತ್ ಕುಮಾರ್ ಪೇಂಟರ್.

ಲಿಂಗರಾಜು ಪುರದ ಗಂಗಮ್ಮ ದೇವಸ್ಥಾನ ಸಮೀಪದ ಮನೆಯೊಂದರ ಬಾಗಿಲನ್ನು ಮುರಿದು ಒಳನುಗ್ಗಿ ಹಣ, ಆಭರಣ ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಜಾನಕಿರಾಮ ಲೇಔಟ್‍ನಲ್ಲಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಕಳವು ಮಾಡಿದ ವಸ್ತುಗಳನ್ನು ತನ್ನ ಭಾವನಿಗೆ ಕೊಟ್ಟಿರುವುದಾಗಿ ತಿಳಿಸಿದ ಮೇರೆಗೆ KGF ಗೆ ಹೋಗಿ ಗೂಂಡಾ ಕಾಯ್ದೆಯಡಿ ಬಂಧಿತನಾಗಿ ಕಾರಾಗೃಹದಲ್ಲಿರುವ ಆರೋಪಿ ಭಾವನನ್ನು ಬಾಡಿ ವಾರೆಂಟ್ ಮುಖೆನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 110 ಗ್ರಾಂ ಚಿನ್ನಾಭರಣ, ನಾಲ್ಕು ದ್ವಿಚಕ್ರ ವಾಹನ, ಎರಡು ಲ್ಯಾಪ್‍ಟಾಪ್, 7 -ಫೋನ್ ವಶಪಡಿಸಿಕೊಂಡಿದ್ದಾರೆ.

ಮೊದಲನೇ ಆರೋಪಿ ವಿರುದ್ಧ ಬಾಣಸವಾಡಿ ಆವಲಹಳ್ಳಿಯಲ್ಲಿನ ಮನೆಗಳ್ಳತನ ಕಾಡುಗೋಡಿ, ಕೊಡಿಗೇಹಳ್ಳಿ ಹಾಗೂ ಆವಲಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿರುತ್ತವೆ.
ಇನ್ಸ್‍ಪೆಕ್ಟರ್ ಅರುಣ್ ಸಾಳುಂಕೆ ಹಾಗೂ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಎಂಟು ಮಂದಿ ದ್ವಿಚಕ್ರ ವಾಹನ ಚೋರರ ಬಂಧನ: 36.96 ಲಕ್ಷ ಮೌಲ್ಯದ 37 ವಾಹನಗಳ ಜಪ್ತಿ
ಬೆಂಗಳೂರು, ಜು.23- ನಗರದ ಪೊಲೀಸರು ಎಂಟು ಮಂದಿ ದ್ವಿಚಕ್ರ ವಾಹನ ಚೋರರನ್ನು ಬಂಧಿಸಿ 36.96 ಲಕ್ಷ ರೂ. ಮೌಲ್ಯದ 37 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಗಲಗುಂಟೆ: ಮನೆ ಮುಂದೆ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಹಾಸನ, ಮಂಡ್ಯದಲ್ಲಿ ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 20 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನ ಮಾಡಿದ ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದ ವ್ಯಕ್ತಿಗಳಿಂದ 15 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳ ಬಂಧನದಿಂದ 15 ದ್ವಿಚಕ್ರ ವಾಹನ ಪ್ರಕರಣಗಳು ಪತ್ತೆಯಾಗಿವೆ. ಇನ್ಸ್‍ಪೆಕ್ಟರ್ ಹನುಮಂತರಾಜು ಹಾಗೂ ಸಿಬ್ಬಂದಿ ತಂಡ ಪ್ರಕರಣವನ್ನು ಭೇದಿಸಿದೆ.

ಗಿರಿನಗರ: ಬೀಗ ಹಾಕಿ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳ ಹ್ಯಾಂಡಲ್‍ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ 10.71 ಲಕ್ಷ ರೂ. ಮೌಲ್ಯದ ಎಂಟು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ರಾತ್ರಿ ವೇಳೆ ಕಳ್ಳತನ ಮಾಡಿದ್ದ ಆರು ದ್ವಿಚಕ್ರ ವಾಹನಗಳನ್ನು ಬ್ಯಾಡರಹಳ್ಳಿ ಹಾಗೂ ಹೇರೋಹಳ್ಳಿಯ ಕೆರೆ ಪಕ್ಕದ ಜಾಗದಲ್ಲಿ ನಿಲ್ಲಿಸಲಾಗಿತ್ತು. ಅಲ್ಲದೆ ಮತ್ತೊಂದು ದ್ವಿಚಕ್ರ ವಾಹನವನ್ನು ಆವಲಹಳ್ಳಿಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವುದಾಗಿ ಆರೋಪಿಗಳು ತಿಳಿಸಿದ ಮೇರೆಗೆ ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವರ ಬಂಧನದಿಂದ ಎಂಟು ಪ್ರಕರಣಗಳು ಪತ್ತೆಯಾಗಿವೆ.
ಇನ್ಸ್‍ಪೆಕ್ಟರ್ ಸತೀಶ್‍ಕುಮಾರ್ ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿ.ಕೆ. ಅಚ್ಚುಕಟ್ಟು:
ಮನೆ ಮುಂದೆ ನಿಲ್ಲಿಸಿದಂತಹ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಇಬ್ಬರನ್ನು ಸಿಕೆ ಅಚ್ಚುಕಟ್ಟು ಠಾಣೆ ಪೆÇಲೀಸರು ಬಂ„ಸಿ 5.43 ಲಕ್ಷ ಬೆಲೆಬಾಳುವ 9 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯ ಅರಬಿಕ್ ಕಾಲೇಜು ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದಾಗಿ ತಿಳಿಸಿದ ಮೇರೆಗೆ ಖಾಲಿ ಜಾಗದ ಬಳಿ ನಿಲ್ಲಿಸಿದಂತಹ ಒಟ್ಟು 9 ದ್ವಿಚಕ್ರ ವಾಹನಗಳನ್ನು ಇನ್ಸ್‍ಪೆಕ್ಟರ್ ಗಿರೀಶ್ ನಾಯಕ್ ಹಾಗೂ ಸಿಬ್ಬಂದಿ ತಂಡ ವಶಪಡಿಸಿಕೊಂಡಿದೆ.

ಕುಮಾರಸ್ವಾಮಿ ಲೇಔಟ್: ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದ ಆರೋಪಿಯೊಬ್ಬನನ್ನು ದ್ವಿಚಕ್ರ ವಾಹನ ಸಮೇತ ಬಂ„ಸಿ ವಿಚಾರಣೆಗೊಳಪಡಿಸಿದಾಗ ನಗರದ ವಿವಿಧ ಕಡೆ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಆತನಿಂದ 80 ಸಾವಿರ ಮೌಲ್ಯದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಕಳ್ಳತನ ಮಾಡಿದ ದ್ವಿಚಕ್ರ ವಾಹನಗಳನ್ನು ಮುನಿಯಪ್ಪ ಕಾಂಪೌಂಡ್‍ನ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಬಗ್ಗೆ ತಿಳಿಸಿದ ಮೇರೆಗೆ ಮೂರು ದ್ವಿಚಕ್ರ ವಾಹನ ಸೇರಿ ನಾಲ್ಕು ವಾಹನಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಇನ್ಸ್‍ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News