Friday, August 15, 2025
Homeರಾಷ್ಟ್ರೀಯ | Nationalಕಾಶ್ಮೀರದ ಕಿಶ್ತಾವರ್‌ ಜಿಲ್ಲೆಯಲ್ಲಿ ಮೇಘಸ್ಫೋಟಕ್ಕೆ 60ಕ್ಕೂ ಹೆಚ್ಚು ಮಂದಿ ಬಲಿ, ಮಚೈಲ್‌ ಮಾತಾ ಯಾತ್ರೆ ಸ್ಥಗಿತ

ಕಾಶ್ಮೀರದ ಕಿಶ್ತಾವರ್‌ ಜಿಲ್ಲೆಯಲ್ಲಿ ಮೇಘಸ್ಫೋಟಕ್ಕೆ 60ಕ್ಕೂ ಹೆಚ್ಚು ಮಂದಿ ಬಲಿ, ಮಚೈಲ್‌ ಮಾತಾ ಯಾತ್ರೆ ಸ್ಥಗಿತ

Kishtwar cloudburst : J&K cloudburst deaths rise to 60, hundreds still missing as rescue ops intensify

ಶ್ರೀನಗರ,ಆ.15- ಜಮ್ಮು ಮತ್ತು ಕಾಶ್ಮೀರದ ಕಿಶ್ತಾವರ್‌ ಜಿಲ್ಲೆಯ ಚಶೋತಿ ಪ್ರದೇಶದಲ್ಲಿ ನಿನ್ನೆ ಸಂಭವಿಸಿದ ಭಾರೀ ಮೇಘಸ್ಫೋಟದಿಂದ ಉಂಟಾದಪ್ರವಾಹದಲ್ಲಿ ಕನಿಷ್ಠ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಅಧಿಕಾರಿಗಳ ಪ್ರಕಾರ, 38 ಜನರ ಸ್ಥಿತಿ ಗಂಭೀರವಾಗಿದೆ. ನೂರಾರು ಮಂದಿ ಗಾಯಗೊಂಡಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮಚೈಲ್‌ ಮಾತಾ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಚಶೋತಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಅನೇಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಅಪಘಾತದ ಸಮಯದಲ್ಲಿ, ಮಚೈಲ್‌ ಮಾತಾ ಯಾತ್ರೆಗಾಗಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಮೇಘಸ್ಫೋಟ ಸಂಭವಿಸಿದಾಗ ದುರಂತದ ಸ್ಥಳದಲ್ಲಿ 250ಕ್ಕೂ ಹೆಚ್ಚು ಜನರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ವಿಪತ್ತು ಪ್ರತಿಕ್ರಿಯಾ ತಂಡ (ಎಸ್‌‍ಡಿಆರೆಫ್‌), ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರೆಫ್‌) ಹಾಗೂ ಸೇನಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸೇನೆಯು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಕೈಜೋಡಿಸಿದೆ ಎಂದು ಜಮು ಮೂಲದ ಸೇನಾ ವಕ್ತಾರರು ತಿಳಿಸಿದ್ದಾರೆ, ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಇಲ್ಲಿಯವರೆಗೆ, 100ರಿಂದ 150 ಜನರು ಗಾಯಗೊಂಡಿದ್ದಾರೆ ಮತ್ತು ಸಿಲುಕಿಕೊಂಡಿರುವವರನ್ನು ಸ್ಥಳಾಂತರಿಸಲು ಮತ್ತು ವೈದ್ಯಕೀಯ ನೆರವು ನೀಡಲು ನಾವು ಸಾಧ್ಯವಿರುವ ಕೆಲಸ ಮಾಡುತ್ತಿದ್ದೇವೆ ಎಂದು ಕಿಶಾ್ತ್ವರ್‌ ಡಿಡಿಸಿ ಅಧ್ಯಕ್ಷೆ ಪೂಜಾ ಠಾಕೂರ್‌ ತಿಳಿಸಿದ್ದಾರೆ. ದಿಢೀರ್‌ ಪ್ರವಾಹ ಉಂಟಾದ ಕಾರಣ ಸಿಆರ್‌ಪಿಎಫ್‌ ಶಿಬಿರದ ಪಾರ್ಕಿಂಗ್‌ ಸ್ಥಳ, ಲಂಗರ್‌ (ಸಮುದಾಯ ಅಡುಗೆಮನೆ) ಪ್ರದೇಶವನ್ನು ಆವರಿಸಿದ್ದು, ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದಾಗಿ ಗ್ರಾಮದ ರಸ್ತೆಗಳು ಕೊಚ್ಚಿ ಹೋಗಿದ್ದು, ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದೆ. ತೀವ್ರವಾಗಿ ಗಾಯಗೊಂಡಿರುವ ಯಾತ್ರಾರ್ಥಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿರುವುದಾಗಿ ತಿಳಿಸಿದ್ದಾರೆ.

ಕಿಶ್ತಾವರ್‌ನ ಚಶೋತಿ ಗ್ರಾಮವು ನಗರದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ. ಯಾತ್ರಿಕರಿಗಾಗಿ ಸ್ಥಾಪಿಸಲಾದ ಲಂಗಾರ್‌ ಈ ವಿನಾಶದಿಂದ ಹೆಚ್ಚು ಹಾನಿಗೊಳಗಾಯಿತು. ಮೇಘಸ್ಫೋಟವು ದಿಢೀರ್‌ ಪ್ರವಾಹಕ್ಕೆ ಕಾರಣವಾಯಿತು. ಅಂಗಡಿಗಳು ಮತ್ತು ಭದ್ರತಾ ಪೋಸ್ಟ್‌ ಸೇರಿದಂತೆ ಹಲವಾರು ಕಟ್ಟಡಗಳು ಕೊಚ್ಚಿಹೋದವು.

ಕೆಸರು ನೀರು, ಹೂಳು ಮತ್ತು ಶಿಲಾಖಂಡರಾಶಿಗಳ ಪ್ರವಾಹವು ವಿನಾಶವನ್ನುಂಟುಮಾಡಿತು. ಅದರ ಹಾದಿಯಲ್ಲಿದ್ದ ಎಲ್ಲವೂ ನಾಶವಾಯಿತು. ಜೀವಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಮನೆಗಳು ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿದಿದ್ದು, ರಸ್ತೆಗಳು ಮತ್ತು ತಪ್ಪಿಸಿಕೊಳ್ಳುವ ಮಾರ್ಗಗಳು ಮುಚ್ಚಿಹೋಗಿವೆ. ಈ ವಿನಾಶವು ಹಚ್ಚ ಹಸಿರಿನ ಭೂದೃಶ್ಯವನ್ನು ಗಾಢ ಕಂದು-ಬೂದು ಬಣ್ಣಕ್ಕೆ ತಿರುಗಿಸಿದೆ.ರಕ್ಷಣಾ ತಂಡವು ಸಾವಿನ ದವಡೆಯಿಂದ ಜನರನ್ನು ರಕ್ಷಿಸಿದ್ದು, ಅಥೋಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರು ವರ್ಷದ ಮಗು ಸೇರಿದಂತೆ ಗಾಯಗೊಂಡ ಜನರು ಆ ದುರಂತದ ನೋವನ್ನು ಹಂಚಿಕೊಂಡಿದ್ದಾರೆ.

ಮೇಘ ಸ್ಫೋಟದಿಂದ ಉಂಟಾದ ವಿನಾಶ ಎಲ್ಲೆಡೆ ಕೋಲಾಹಲ ಸೃಷ್ಟಿಸಿತು. ಜನರು ಇನ್ನೂ ಆ ದೃಶ್ಯವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ದೃಶ್ಯವು ಹೆಚ್ಚು ಭಯಾನಕವಾಗುತ್ತಿದೆ. ಅವಶೇಷಗಳಲ್ಲಿ ಜೀವಗಳು ಹೂತುಹೋಗಿವೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ 47 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ಅನೇಕ ಶವಗಳನ್ನು ಹೊರತೆಗೆಯುವ ಹೋರಾಟ ಮುಂದುವರೆದಿದೆ. ಅವಶೇಷಗಳಲ್ಲಿ ಇನ್ನೂ ಜೀವಗಳನ್ನು ಹುಡುಕಲಾಗುತ್ತಿದ್ದು, ಸೂರ್ಯಾಸ್ತದವರೆಗೆ ಚಶೋತಿ ಗ್ರಾಮದಿಂದ 167 ಜನರನ್ನು ಸ್ಥಳಾಂತರಿಸಲಾಗಿದೆ.

9,500 ಅಡಿ ಎತ್ತರದಲ್ಲಿರುವ ಮಚೈಲ್‌ ಮಾತಾ ದೇವಸ್ಥಾನವನ್ನು ತಲುಪಲು, ಭಕ್ತರು ವಾಹನದ ಮೂಲಕ ಚಶೋತಿ ಗ್ರಾಮವನ್ನು ತಲುಪಬಹುದು, ನಂತರ ಅವರು 8.5 ಕಿ.ಮೀ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕು. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಹಠಾತ್‌ ಪ್ರವಾಹ ಸಂಭವಿಸಿದ ಕೇವಲ ಒಂಬತ್ತು ದಿನಗಳ ನಂತರ ಹಿಮಾಲಯದ ದುರ್ಬಲವಾದ ಇಳಿಜಾರುಗಳಲ್ಲಿ ಈ ವಿನಾಶ ಕಂಡುಬಂದಿದೆ. ಆಗಸ್ಟ್‌ 5ರಂದು ಉತ್ತರಾಖಂಡದಲ್ಲಿ ಸಂಭವಿಸಿದ ಆ ದುರಂತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ, ಆದರೆ 68 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಮೇಘಸ್ಫೋಟದಿಂದಾಗಿ ಮಚೈಲ್‌ ಮಾತಾ ವಾರ್ಷಿಕ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಚಶೋತಿ ಗ್ರಾಮವು ಮಚೈಲ್‌ ಮಾತಾ ದೇವಸ್ಥಾನಕ್ಕೆ ತೆರಳಲು ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದ ಒಂದೇ ಒಂದು ಮಾರ್ಗವಾಗಿತ್ತು. ಇದೀಗ ಮೇಘಸ್ಫೋಟದಿಂದಾಗಿ ಕೆಸರು, ಕಲ್ಲು, ಮಣ್ಣುಗಳಿಂದ ಗ್ರಾಮದ ಬಹುತೇಕ ಭಾಗ ಆವೃತವಾಗಿದೆ. ಈ ಕಾರಣ ಯಾತ್ರೆ ಸ್ಥಗಿತಗೊಳಿಸಲಾಗಿದೆ.

RELATED ARTICLES

Latest News